ಬ್ರಹ್ಮಾವರ : ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರ ತಾಲೂಕು ಘೋಷಣೆ ಯಾದ ಬಳಿಕ ಇಲ್ಲಿಗೆ ಅತೀ ಅಗತ್ಯ ಇರುವ ಮಿನಿ ವಿಧಾನ ಸೌಧಕ್ಕೆ ಹಳೆ ಪ್ರವಾಸಿ ಮಂದಿರದ ಬಳಿಯ ಸರಕಾರಿ ಜಾಗದಲ್ಲಿ ರಚನೆಯಾಗಲು ಚಾಲನೆ ದೊರೆತು ಕಾಮಗಾರಿ ಭರದಿಂದ ಸಾಗುತ್ತಿದೆ. 2021 ಮಾರ್ಚ್ ತಿಂಗಳಲ್ಲಿ ಕಾಪು ದೇವಿ ಪ್ರಸಾದ್ ಗುತ್ತಿಗೆದಾರರ ಮಾರ್ಗದರ್ಶನಲ್ಲಿ ಬ್ರಹ್ಮಾವರದ ಇಂಜಿನಿಯರ್ ಪ್ರಮೋದ್ ಶೆಟ್ಟಿ ಅವರ ನೇತೃತ್ವದಲ್ಲಿ ಅತೀ ವೇಗವಾಗಿ ಕಾಮಗಾರಿ ನಡೆಯುತ್ತಿದೆ. 3.20 ಎಕ್ರೆ ಜಾಗದಲ್ಲಿ 34 ಸಾವಿರ ಚದರ ಅಡಿಯಲ್ಲಿ 4 ಮೀಟರ್ ಎತ್ತರದ 2 ಮಹಡಿಯಲ್ಲಿ ಒಟ್ಟು 16 ಮೀಟರ್ ಎತ್ತರದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಲಿದೆ.
10 ತಿಂಗಳ ಅವಧಿಯಲ್ಲಿ ಮುಗಿಸಿ ಕೊಡುವ ಕರಾರಿಗೆ 2 ತಿಂಗಳು ಕೋರೋನ ಸಮಸ್ಯೆ ಮತ್ತು 1 ತಿಂಗಳು ಜಲ್ಲಿ ಸಿಗದಿರುವುದರಿಂದ 3 ತಿಂಗಳ ಅವಧಿ ಮುಂದುವರಿದಿದೆ. ಈಗಾಗಲೇ ಒಂದು ಹಂತದ ಕಾಮಗಾರಿಯಲ್ಲಿ ತಳ ಮಟ್ಟ ಮುಗಿದಿದ್ದು, 2ನೇ ಮಹಡಿಯ ಕಾಮಗಾರಿ ಆರಂಭವಾಗಿದೆ. ಸೌಧದ ರಚನೆಗೆ ಎಂ .ಸ್ಯಾಂಡ್ ಬಳಕೆ ಮತ್ತು ರೆಡಿಮಿಕ್ಸ್ ಇಲ್ಲದೆ ಕಾಂಕ್ರೀಟೀಕರಣಗೊಂಡಿದೆ. ತಾಲೂಕು ಕಛೇರಿ, ಸಬ್ ರಿಜಿಸ್ಟಾರ್ ಕಛೇರಿ ಸರ್ವೆ, ಭೂಮಿಕೇಂದ್ರ ಕೋರ್ಟ್, ಮತದಾನ ಸಂಬಂಧಿ ಕಛೇರಿ, ಆಹಾರ ಮತ್ತು ನಾಗರೀಕ ಪೂರೈಕೆ ಕಛೇರಿ ಸೇರಿದಂತೆ ಒಂದೇ ಕಡೆಯಲ್ಲಿ ಸಾರ್ವಜನಿಕರಿಗೆ ಸೌಕರ್ಯ ಸಿಗಲಿದೆ. ಈಗಿರುವ ಕಾಮಗಾರಿಯ ವೇಗದಂತೆ ನಡೆದರೆ ಅಂದುಕೊಂಡಂತೆ ಮುಂದಿನ ವರ್ಷ ಮೇ ತಿಂಗಳಲ್ಲಿ ಮಿನಿವಿಧಾನ ಸೌಧ ಕಾಮಗಾರಿ ಮುಕ್ತಾಯಗೊಂಡು ಲೋಕಾರ್ಪಣೆಗೆ ಸಿದ್ಧವಾಗಲಿದೆ.