ವರದಿ : ದಿನೇಶ್ ರಾಯಪ್ಪನಮಠ
ಕೋಟ :ನೀಲಾವರ ಸುರೇಂದ್ರ ಅಡಿಗರು ಪಂಜೆ ಮಂಗೇಶ್ವರ ರಾಯರ ಸಹಪಾಠಿ ಎನ್ನಬಹುದು. ಅವರಲ್ಲಿ ಸ್ಥಾಯಿಭಾವ, ಪ್ರಸನ್ನತೆ, ಸಂಭ್ರಮ ಅಡಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡು ಕನ್ನಡದ ದೀಪವನ್ನು ಹಚ್ಚಿದವರು ಅಡಿಗರು ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದರು.
ಕೋಟ ಮಾಂಗಲ್ಯ ಮಂದಿರದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ 60 ವರ್ಷದ ಸಂಭ್ರಮ ಭಾವಬಿಂದು ಸಾಹಿತ್ಯ ಸಂಭ್ರಮದಲ್ಲಿ ದೀಪ ಪ್ರಜ್ವಲನಗೈದು ಮಾತನಾಡಿದರು.
ಅಡಿಗರು ಕನ್ನಡವನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಥಮಿಕ ಶಾಲಾ ಮಕ್ಕಳ ಮೂಲಕ ಕನ್ನಡವನ್ನು ಗಟ್ಟಿಗೊಳಿಸಿದರು ಎಂದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಮೋಹನ್ ಆಳ್ವಾ ಚಂಡೆ ಭಾರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ ಉಳಿದಿದೆ. ಅಡಿಗರ ಚಟುವಟಿಕೆ ಎಲ್ಲರಿಗೂ ಸ್ಪೂರ್ತಿ ನೀಡುವಂತದ್ದು. ಕನ್ನಡಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿದ ಅಡಿಗರು ಎರಡು ಬಾರಿ ಉಡುಪಿ ಕಸಾಪದ ಅಧ್ಯಕ್ಷರಾಗಿ ಸೇವೆಯನ್ನು ಮಾಡಿದವರು. ಮೂರನೇಯ ಬಾರಿಯೂ ಅವರೇ ಆಯ್ಕೆಯಾಗಲಿ ಎಂದರು.
ಕಳೆದ ಎರಡು ವರ್ಷಗಳಿಂದ ದೇಶವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗದಿಂದ ಯಾವುದೇ ಸಾಂಸೃತಿಕ ಚಟುವಟಿಕೆ ನಡೆಸಲು ನಮ್ಮಿಂದ ಸಾಧ್ಯವಾಗಿಲ್ಲ. ಇದೇ ಡಿಸೆಂಬರ್, ಜನವರಿಯಲ್ಲಿ ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ನ್ನು ಮತ್ತೆ ಸರಳ ರೀತಿಯಲ್ಲಿ ಪ್ರಾರಂಭಿಸಲು ಯೋಜನೆ ಇದೆ ಎಂದು ಅವರು ಹೇಳಿದರು.
ಸಾಂಸ್ಕೃತಿಕ ಚಿಂತಕ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನರೇಂದ್ರ ಕುಮಾರ್ ಕೋಟ, ಪಿ.ವಿ ಆನಂದ್, ಹಿರಿಯ ನಿವೃತ್ತ ಶಿಕ್ಷಕರಾದ ನೀಲಾವರ ಸೀತಾರಾಮ ಭಟ್, ಕೋಟ ಶ್ರೀಧರ ಹಂದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಾಪಕ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಯೀಂದ್ರ ಹಂದೆ, ಸತೀಶ್ ವಡ್ಡರ್ಸೆ ಸಹಕರಿಸಿದರು. ಶಿಕ್ಷಕಿ ಮಹಾಲಕ್ಷ್ಮಿ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.