ಕರಾವಳಿ

ಕುಂದಾಪುರ : ಶಾಹೀನ್ ಚಂಡಮಾರುತ ಪರಿಣಾಮ : ಧರೆಗುರುಳಿದ ಅಡಿಕೆ, ತೆಂಗಿನ ಮರಗಳು; ಮನೆಗಳಿಗೂ ಹಾನಿ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ: ಶಾಹೀನ್ ಚಂಡಮಾರುತದ ಪರಿಣಾಮದಿಂದ ಮಂಗಳವಾರ ಸಂಜೆ ವೇಳೆಗೆ ಬೀಸಿದ ಭಾರಿ ಸುಂಟರಗಾಳಿಯಿಂದಾಗಿ ಕುಂದಾಪುರ ತಾಲೂಕಿನ ಅಂಪಾರು ಮೂಡುಬಗೆ ಪ್ರದೇಶದಲ್ಲಿ ತೋಟದಲ್ಲಿನ ಸಾವಿರಾರು ಅಡಿಕೆ ಮರಗಳು, ನೂರು ತೆಂಗಿನ ಮರಗಳು ಸಂಪೂರ್ಣ ಧರಾಶಾಹಿಯಾಗಿದ್ದು ಹಲವು ಮನೆಗಳು ಹಾನಿಯಾಗಿದ್ದು ಹಲವರ ಬದುಕು‌ ಮೂರಾಬಟ್ಟೆಯಾಗಿದೆ.

ಸುಂಟರಗಾಳಿಗೆ ನಲುಗಿದ ಜನರು:
ಅಂಪಾರಿನ ಮೂಡುಬಗೆ ಗ್ರಾಮದಲ್ಲಿ ಮಂಗಳವಾರ ಸಂಜೆ 3 ಗಂಟೆ ಬಳಿಕ ಬೀಸಿದ ಭಾರಿ ಸುಂಟರಗಾಳಿಗೆ 50 ಕ್ಕೂ ಅಧಿಕ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ. ಒಟ್ಟು 6000ಕ್ಕೂ ಅಧಿಕ ಅಡಿಕೆ ಮರ, ನೂರಾರು ತೆಂಗಿನ ಮರಗಳು ಧರೆಗುರುಳಿದೆ. 50ಕ್ಕೂ ಅಧಿಕ ಮನೆಗಳು ಸಂಪೂರ್ಣ‌ ಹಾನಿಯಾಗಿದ್ದು ಜನರು ಸಮಸ್ಯೆಗೀಡಾಗಿದ್ದಾರೆ. ಅಡಿಕೆಯನ್ನು ನಂಬಿಕೊಂಡಿರುವ ಈ ಭಾಗದ ಜನರ ಬದುಕಲ್ಲಿ ಬೀಸಿದ ಸುಂಟರಗಾಳಿ ಕೋಲಾಹಲ ಎಬ್ಬಿಸಿದೆ‌. ಹಲವು ವಿದ್ಯುತ್ ಕಂಬಗಳು‌ ಧರೆಗುರುಳಿದ್ದು ವಿದ್ಯುತ್ ಕಂಬಗಳ ಜೋಡಣೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

Advertisement. Scroll to continue reading.

ಬಚಾವ್ ಆದ ಬಾಣಂತಿ, ಮೂರುವರೆ ತಿಂಗಳ ಕೂಸು :
ಸುಬ್ಬ ಮೂಡುಬಗೆ ಎನ್ನುವರ ಮನೆ ಮೇಲೆ ಮರಬಿದ್ದಿದ್ದು ಅದೃಷ್ಟವಶಾತ್ ಮನೆಯೊಳಗಿದ್ದ ಬಾಣಂತಿ ಹಾಗೂ ಮೂರೂವರೆ ತಿಂಗಳ ಗಂಡು ಮಗು ಬಚಾವ್ ಆಗಿದ್ದಾರೆ. ಮನೆ ಹಾಗೂ ತೋಟ ಕಳೆದುಕೊಂಡ ಮಂದಿ ಮಾಧ್ಯಮದ ಮುಂದೆ ಕಣ್ಣೀರಿಟ್ಟು ನೋವು ತೋಡಿಕೊಂಡರು. ‘ಮನೆ‌ಮೇಲೆ ಮರ ಬಿತ್ತು…ಅದ್ಯೆಗೋ ಮಕ್ಕಳು ಮರಿಯೊಂದಿಗೆ ಓಡಿ ಪಾರಾದೆವು’ ಎಂದು‌ ಮಹಿಳೆಯೊಬ್ಬರು ಘಟನೆ‌ ಭೀಕರತೆ ಬಗ್ಗೆ ಹೇಳಿದ್ದಾರೆ. ಮನೆ ಮಕ್ಕಳಂತೆ ತೋಟ ಪೋಷಿಸಿದ್ದೆವು. ಆದರೆ ಇದೀಗಾ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಜೀವನವೇ ಹೋದಂತಾಗಿದೆ’ ಎಂದು ಹಿರಿಯ ಕೃಷಿಕ ಸುಬ್ಬಣ್ಣ ಶೆಟ್ಟಿ ಆವರ್ಸೆಮನೆ ಕಣ್ಣೀರು ಹಾಕಿದರು. ‘ಸರಕಾರ‌ ಕೊಡುವ ಪರಿಹಾರ ಮೊತ್ತದಲ್ಲಿ ತೋಟದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲು ಆಗಲ್ಲ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಪರಿಹಾರಕ್ಕೆ ಅಲೆದಾಟ ತಪ್ಪುವುದಿಲ್ಲ’ ಎಂದು ಮಹಿಳೆಯೊಬ್ಬರು ಅಸಹಾಯಕತೆ ತೋಡಿಕೊಂಡರು. ‘ಕಣ್ಣೀರೊರಿಸಲು ಪರಿಹಾರ ಧನ ನೀಡುವುದು ಬೇಡ. ಅದರ ಬದಲು ಬಿದ್ದಿರುವ ಮರಗಳನ್ನು ಕ್ಲೀನ್ ಮಾಡಿ ಅಡಿಕೆ ಸಸಿಯನ್ನು ನೀಡಿ, ನಾವೇ ಏನಾದರೂ ಮಾಡುತ್ತೇವೆ ಎಂದು ಕೃಷಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್ ಭೇಟಿ :
ಸುಂಟರಗಾಳಿಯಿಂದ ಅಂಪಾರಿನ ಮೂಡುಬಗೆಯಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಮಂಗಳವಾರ‌ ಸಂಜೆ ಹಾಗೂ ಬುಧವಾರ ಕೂಡ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಸಂದರ್ಭ ಮಾಧ್ಯಮದ ಜೊತೆ‌ ಮಾತನಾಡಿದ ತಹಶಿಲ್ದಾರ್, ಹಲವಾರು ಫಲಭರಿತ ಅಡಿಕೆ ಹಾಗೂ ತೆಂಗಿನ ಮರಗಳು, ಮನೆಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ. ಸರ್ವೇ ಕಾರ್ಯ ಮುಗಿದ ಮೇಲೆ ನಿಖರವಾಗಿ ಒಟ್ಟು ನಷ್ಟದ ಮೌಲ್ಯ ತಿಳಿಯುತ್ತದೆ. ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಲಾಗುತ್ತದೆ. ಮನೆ ಮೇಲೆ‌ ಬಿದ್ದ ಮರಗಳ ತೆರವು ಕಾರ್ಯ ಕ್ಷಿಪ್ರವಾಗಿ ಮಾಡಲಾಗುತ್ತಿದೆ. ಸುಂಟರಗಾಳಿ ಪರಿಣಾಮ ನಡೆದ ಈ ಘಟನೆಯಲ್ಲಿ ಜೀವ ಹಾನಿಯಾಗಿಲ್ಲ ಆದರೆ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಪರಿಹಾರಕ್ಕೆ ಆಗ್ರಹಿಸಿದ ವಂಡ್ಸೆ ಬ್ಲಾಕ್ ಕಾಂಗ್ರೆಸ್ :
ಸರಕಾರ ಸುಂಟರಗಾಳಿಯಿಂದ ಹಾನಿಗೊಳಗಾದ ಪ್ರದೇಶಕ್ಕೆ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ನೇತೃತ್ವದಲ್ಲಿ ನಿಯೋಗವು ಭೇಟಿ ನೀಡಿ ನೊಂದವರಿಗೆ ಸಾಂತ್ವಾನ ಹೇಳಿದರು. ಮಳೆಯ ನಡುವೆ ಹಾನಿ ವೀಕ್ಷಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೊರೋನಾದಂತಹ ಸಂದರ್ಭದಲ್ಲಿ ಜನರು‌ ಜೀವನ‌ ನಡೆಸುವುದೇ ಕಷ್ಟಕರವಾಗಿದ್ದು ಕೃಷಿ ಕಾಯಕವನ್ನೇ ನಂಬಿಕೊಂಡಿರುವ ರೈತರಿಗೆ ಭೀಕರ ಸುಂಟರಗಾಳಿಯಿಂದ ನಷ್ಟವಾಗಿದೆ. ಸರಕಾರ ಕಣ್ಣೊರೆಸುವ ಸಮೀಕ್ಷೆ ಹಾಗೂ ಪರಿಹಾರ ನೀಡುವುದನ್ನು ಬ್ಲಾಕ್ ಕಾಂಗ್ರೆಸ್ ಒಪ್ಪುವುದಿಲ್ಲ. ಒಂದು ದಿನ ಕಳೆದರೂ ತಹಶಿಲ್ದಾರ್ ಬಿಟ್ಟರೆ ಜಿಲ್ಲಾಧಿಕಾರಿಗಳು ಸಹಿತ ಜಿಲ್ಲಾ ಉಸ್ತುವಾರಿ‌ ಸಚಿವರು, ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ‌ ನೀಡಿಲ್ಲ. ಸಂಬಂದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ವಯಂ ಭೇಟಿ ನೀಡಿ ವೀಕ್ಷಣೆ ಮಾಡಿ ಭೀಕರ ಸುಂಟರಗಾಳಿಯಿಂದ ನಷ್ಟಕ್ಕೊಳಗಾದವರಿಗೆ ಸರಕಾರ ಗ್ರಾಮಕ್ಕೆ ವಿಶೇಷ ಕಾಳಜಿ ವಹಿಸಿ ಪ್ಯಾಕೇಜ್ ಘೋಷಣೆ ಮಾಡಬೇಕು. 2003ರಲ್ಲಿ ಈ ಭಾಗದಲ್ಲಿ ಇಂತಹುದೇ ಸಮಸ್ಯೆಯಾದಾಗ ಕಾಂಗ್ರೆಸ್ ಸರಕಾರ ಉತ್ತಮ‌ ಪ್ಯಾಕೇಜ್ ನೀಡಿತ್ತು. ರೈತರ ನೋವಿಗೆ ಮಿಡಿಯಬೇಕಾದ ಜನಪ್ರತಿನಿಧಿಗಳು ಬೇಜವಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಶೀಘ್ರವೆ ಜನರಿಗೆ ಪರಿಹಾರ ನೀಡುವ ಕಾರ್ಯವಾಗಬೇಕು. ಇಲ್ಲವಾದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೀದಿಗಿಳಿದು ಉಘ್ರ ಹೋರಾಟ ‌ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ‌ ಸಂದರ್ಭ ಮಾಜಿ ಜಿ.ಪಂ ಸದಸ್ಯೆ ಜ್ಯೋತಿ ಕಾವ್ರಾಡಿ, ಅಂಪಾರು ಗ್ರಾ.ಪಂ ಸದಸ್ಯರಾದ ಕಿರಣ್ ಹೆಗ್ಡೆ ಅಂಪಾರು, ಗಣೇಶ್ ಮೊಗವೀರ, ಮಾಜಿ‌ ಗ್ರಾ.ಪಂ‌ ಅಧ್ಯಕ್ಷ ಸಂತೋಷ ಶೆಟ್ಟಿ ಬಲಾಡಿ, ಮಾಜಿ ಸದಸ್ಯರಾದ ಉದಯಕುಮಾರ ಶೆಟ್ಟಿ, ಮನೋಹರ ಶೆಟ್ಟಿ, ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಚಂದ್ರ ಉಡುಪ, ಅಂಪಾರು‌ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜಿತ್ ಕುಲಾಲ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕಾಧ್ಯಕ್ಷ ಉಮೇಶ್, ಮುಖಂಡರಾದ ಅಚ್ಯುತ ಎಂ, ಮಧುಕರ ಶೆಟ್ಟಿ, ಶಂಕರ ಕೊಠಾರಿ, ಅಭಿಷೇಕ್, ಆಕಾಶ್ ಶೆಟ್ಟಿ ಇದ್ದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com