ಕಾಪು: ಇಲ್ಲಿನ ಕಾಡಿಪಟ್ಣ ವಿಷ್ಣು ಭಜನಾ ಮಂದಿರ ಬಳಿಯ ಕಡಲ ಕಿನಾರೆಯಲ್ಲಿ ದುರಂತಕ್ಕೀಡಾಗಿ ಬೀಡು ಬಿಟ್ಟಿರುವ ಅಲಾಯನ್ಸ್ ಹೆಸರಿನ ಟಗ್ ನಿಂದ ನಡೆದಾಡುವ ಶಬ್ದಗಳು ಕೇಳಿಸುತ್ತಿವೆ ಎಂಬ ವದಂತಿಗೆ ಸ್ಥಳೀಯ ನಿವಾಸಿಗಳು ಪ್ರತಿಕ್ರಿಯಿಸಿದ್ದು ಇಲ್ಲಿ ವಾಸಿಸುತ್ತಿರುವ ಮತ್ತು ಪ್ರತಿನಿತ್ಯ ಮೀನುಗಾರಿಕೆ ನಡೆಸುತ್ತಿರುವ ಯಾರಿಗೂ ಈವರೆಗೆ ಯಾವುದೇ ಶಬ್ದಗಳು ಅಥವಾ ಚಲನವಲನಗಳ ಭಾಸವಾಗಿಲ್ಲ ಎಂದು ತಿಳಿಸಿದ್ದಾರೆ.
ತೌಕ್ತೆ ಚಂಡಮಾರುತದಿಂದಾಗಿ ಸಮುದ್ರದಲ್ಲಿ ದುರಂತಕ್ಕೀಡಾಗಿ ಕಡಲ ತೀರಕ್ಕೆ ತೇಲಿ ಬಂದ ಟಗ್ ನಮ್ಮೂರಿನ ಕಡಲತಡಿ ಸೇರಿ ೫ ತಿಂಗಳುಗಳು ಕಳೆದಿದೆ. ಅಂದಿನಿಂದ ಇಂದಿನವರೆಗೆ ಸುತ್ತಮುತ್ತಲು ವಾಸಿಸುತ್ತಿರುವ ಮೀನುಗಾರ ಮೀನುಗಾರಿಕಾ ಚಟುವಟಿಕೆಗೆ ತೊಂದರೆಯಾಗಿದೆಯೇ ವಿನಃ ಇಲ್ಲಿಯವರೆಗೆ ಅಗೋಚರ ಅನುಭವಗಳು ಕಾಣ ಸಿಕ್ಕಿಲ್ಲ. ಆದರೆ ಟಗ್ ಅನ್ನು ವೀಕ್ಷಿಸಲು ಬಂದಿರುವ ಪ್ರವಾಸಿಗರಿಗ್ಯಾರಿಗಾದರೂ ಇಂಥಹ ಶಬ್ದಗಳು ಕೇಳಿ ಬಂದಿದ್ದರೆ (ವದಂತಿಯ ಪ್ರಕಾರ), ಸಂಬಂಧಪಟ್ಟ ಇಲಾಖೆ ಮತ್ತು ಕಂಪನಿ ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ವರದಿ ಒಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಗ್ರಮ ಪಂಚಾಯತ್ ಸದಸ್ಯ ವಿನಾಯಕ್ ಪುತ್ರನ್, ಟಗ್‌ಗೆ ಸಂಬಂಧಿಸಿದಂತೆ ವದಂತಿಗಳು ಹೆಚ್ಚುತ್ತಿರುವುದು ನಮ್ಮ ಊರಿನ ಪ್ರಾಕೃತಿಕ ವೈಭವ ಮತ್ತು ಪಾರಂಪರಿಕ ಕಸುಬಿನ ಐಕ್ಯತೆಗೆ ತೀವ್ರ ಹೊಡೆತ ನೀಡುತ್ತಿದೆ. ಇಂಥಹ ಸುದ್ದಿಗಳು ನಿಜ ಎಂದು ಸಾಬೀತಾದರೆ ಜನರ ಮನಸ್ಸಿನಲ್ಲಿ ನಮ್ಮ ಊರು ಪಿಶಾಚಗ್ರಸ್ತವಾಗಿ ಭಾಸವಾಗುವ ಆತಂಕ ಎದುರಾಗಬಹುದು. ಇದರಿಂದಾಗಿ ನಮ್ಮ ಊರಿಗೆ ಸಾಂಸ್ಕೃತಿಕ ಮತ್ತು ಔದ್ಯೋಗಿಕವಾಗಿ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಆದುದರಿಂದ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
Advertisement. Scroll to continue reading.
ತೆರವಿಗೆ ಮನವಿ:
ಟಗ್ ತೆರವಿಗೆ ಪ್ರಾಥಮಿಕ ಹಂತದಲ್ಲಿ ಹಲವಾರು ಕಸರತ್ತುಗಳು ಕಂಪನಿ ಮತ್ತು ಸಂಬಂಧಪಟ್ಟ ಇಲಾಖೆಗಳ ಮೂಲಕ ನಡೆದರೂ, ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಟಗ್‌ನ ಅವಶೇಷವನ್ನು ಕಡಲಕಿನಾರೆಯ ಮರಳಿನಲ್ಲಿ ತಟಸ್ಥಗೊಳಿಸಿ ತೆರಳಿರುವ ಅಧಿಕಾರಿಗಳು ಈವರೆಗೂ ಟಗ್ ತೆರವಿನ ಬಗ್ಗೆ ಯಾವುದೇ ಪೂರಕ ಕ್ರಮ ಕೈಗೊಳ್ಳುತ್ತಿಲ್ಲ. ಟಗ್ ನಿಂದಾಗಿ ಸ್ಥಳೀಯವಾಗಿ ನಮಗೆ ಮತ್ತಷ್ಟು ತೊಂದರೆಗಳು ಎದುರಾಗುವ ಮುನ್ನ ಟಗ್ ತೆರವುಗೊಳಿಸಬೇಕು ಎಂದು ವಿನಾಯಕ್ ಈ ಮೂಲಕ ಮನವಿ ಮಾಡಿದ್ದು, ಒಂದು ವೇಳೆ ಸಂಬಂಧಪಟ್ಟ ಕಂಪನಿ ಆಥವಾ ಅಧಿಕಾರಿಗಳು ಈ ಬಗ್ಗೆ ಮತ್ತಷ್ಟು ನಿರ್ಲಕ್ಷ್ಯ ವಹಿಸಿದರೆ ಊರಿನವರೆಲ್ಲಾ ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.