ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಉಪ ವಿಭಾಗೀಯ ಕೇಂದ್ರ ಕುಂದಾಪುರ ನಗರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಪ್ರವೇಶ ನೀಡುವ ಅಗತ್ಯವಿದೆ. ಜನರ ಬೇಡಿಕೆಯಿದೆ. ವ್ಯಾಪಾರ ವಹಿವಾಟು, ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತದೆ ಎಂದು ಪುರಸಭೆ ಅಧ್ಯಕ್ಷರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಹೆದ್ದಾರಿಯನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವಾಗ ಪುರಸಭೆಗೆ ವಿನ್ಯಾಸದ ಮಾದರಿ ಪ್ರತಿ ನೀಡದೇ ಹಾಲಾಡಿ, ಉಡುಪಿ, ಮಂಗಳೂರು ಭಾಗದಿಂದ ಕುಂದಾಪುರ ಪಟ್ಟಣಕ್ಕೆ ಬರುವ ವಾಹನಗಳಿಗೆ ಸರಿಯಾಗಿ ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಪೂರ್ತಿ ಕುಂದಾಪುರ ಪಟ್ಟಣ ತೊಂದರೆ ಅನುಭವಿಸುವಂತಾಗಿದೆ. ಇದರ ಪರಿಣಾಮವಾಗಿ ವ್ಯಾಪಾರಿಗಳು, ಸರಕಾರಿ ಕಚೇರಿಗಳು, ಆಸ್ಪತ್ರೆ, ದೇವಸ್ಥಾನ, ಕಲ್ಯಾಣ ಮಂಟಪ, ಶಾಲೆ ಕಾಲೇಜುಗಳು ತೊಂದರೆ ಅನುಭವಿಸುವಂತಾಗಿದೆ.
Advertisement. Scroll to continue reading.
ಭವಿಷ್ಯದಲ್ಲಿ ಇದು ಪರಸಭೆಯ ತೆರಿಗೆ ಸಂಗ್ರಹದ ಮೇಲೂ ಪರಿಣಾಮ ಬೀರಲಿದೆ. ಕುಂದಾಪುರ ಪಟ್ಟಣ ಪ್ರವೇಶಕ್ಕೆ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ಸಂಗಮ್‌ದ ಹಿಂಬದಿಯಿಂದ ಕುಂದಾಪುರ ಪ್ರವೇಶಿಸುವಂತಾಗಿದೆ.
ಬ್ರಹ್ಮಾವರ, ತೆಕ್ಕಟ್ಟೆ, ಉಡುಪಿ, ಕೋಟೇಶ್ವರ ಭಾಗಗಳಲ್ಲಿ ಬಾರಿಕೇಡ್ ಅಳವಡಿಸಿ ಯಾವುದೇ ದುರಂತ ಸಂಭವಿಸದಂತೆ ಪೇಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದೇ ಮಾದರಿ ಕುಂದಾಪುರಕ್ಕೂ ಅನುಸರಿಸಬಹುದು. ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ಅತೀ ಅಗತ್ಯವಾಗಿ ನಾನಾಸಾಹೇಬ್ ಬೊಬ್ಬರ್ಯನಕಟ್ಟೆ ಹತ್ತಿರ ನಗರಕ್ಕೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿರುವ ಎಡಭಾಗದ ಡಿವೈಡರ್ ತೆರವುಗೊಳಿಸಿ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮತ್ತು ಆ ಮೂಲಕ ಪಟ್ಟಣ ಪ್ರವೇಶಿಸಲು ಅನುಕೂಲ ಕಲ್ಪಿಸುವಂತೆ ಸರ್ವ ಸದಸ್ಯರು ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದರು. ಯೋಜನಾ ನಿರ್ದೇಶಕರು ಅಸಮ್ಮತಿಸಿದ್ದು ಮತ್ತೂಮ್ಮೆ ಚರ್ಚಿಸು ವುದಾಗಿ ಹೈವೆ ಅಧಿಕಾರಿಗಳು ತಿಳಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಚೇರಿಯು ತನ್ನ ಪ್ರಕಟನೆಯಲ್ಲಿ ಯಾವುದೇ ಪಟ್ಟಣಗಳು ಇಬ್ಭಾಗವಾಗದಂತ ಮತ್ತು ಅಲ್ಲಿನ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಹೆದ್ದಾರಿಯನ್ನು ವಿನ್ಯಾಸಗೊಳಿಸಬೇಕು ಎಂದು ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ. ನಿರ್ಧಾರ ಆಗುವವರೆಗೆ ತಾತ್ಕಾಲಿಕವಾಗಿ ಬೊಬ್ಬರ್ಯನಕಟ್ಟೆ ಹತ್ತಿರ ಪಟ್ಟಣಕ್ಕೆ ಪ್ರವೇಶ ನೀಡಲು ವಿನಂತಿಸಲಾಗಿದೆ.
ಹಾಗೆಯೇ ಹೆದ್ದಾರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಶಾಸ್ತ್ರಿ ಸರ್ಕಲ್‌ನಲ್ಲಿ ಹೈಮಾಸ್ಟ್ ದೀಪ ಈ ವರೆಗೆ ಅಳವಡಿಸಿಲ್ಲ. ವಿನಾಯಕ ಥಿಯೇಟರ್ ಬಳಿ, ಹೊಟೇಲ್ ಹರಿಪ್ರಸಾದ್ ಬಳಿ, ಸಂಗಮ್ ಬಳಿ, ಮಳೆನೀರು ಹೋಗುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದನ್ನೆಲ್ಲ ಸರಿಪಡಿಸಬೇಕು ಎಂದು ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯೀ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ, ಸದಸ್ಯರಾದ ದೇವಕಿ ಸಣ್ಣಯ್ಯ, ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ, ವನಿತಾ ಬಿಲ್ಲವ, ಶ್ವೇತಾ ಸಂತೋಷ್, ಪ್ರಭಾಕರ್ ವಿ., ನಾಮನಿರ್ದೇಶಿತ ಸದಸ್ಯರಾದ ಪುಷ್ಪಾಶೇಟ್, ರತ್ನಾಕರ್ ಶೇರುಗಾರ್ ಉಪಸ್ಥಿತರಿದ್ದರು.
Advertisement. Scroll to continue reading.