ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಅಂಪಾರಿನಲ್ಲಿ ಮಂಗಳವಾರದಂದು ಬೆಳಕಿಗೆ ಬಂದಿದ್ದ ವಿವಾಹಿತನೋರ್ವನ ಆತ್ಮಹತ್ಯೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಮೃತನ ಪತ್ನಿ ಸೇರಿ ಐವರನ್ನು ಬಂಧಿಸಲಾಗಿದೆ.
ಪತ್ನಿ ಮಮತಾ (34), ಆಕೆಯ ಪರಿಚಿತರಾಗಿರುವ ಕುಮಾರ್ ಹಾಗೂ ದಿನಕರ ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಬಾಲಕರನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.
Advertisement. Scroll to continue reading.
ಏನಿದು ಪ್ರಕರಣ?
ನಾಗರಾಜ್ ಸೋಮವಾರ ರಾತ್ರಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ಮಮತಾ ಶಂಕರ ನಾರಾಯಣ ಪೊಲೀಸರಿಗೆ ದೂರು ನೀಡಿದ್ದರು. ನಾಗರಾಜ್ ವಿಪರೀತ ಕುಡಿತದ ಚಟ ಹೊಂದಿದ್ದರಿಂದಲೇ ಜೀವನದ ಬಗ್ಗೆ ಜಿಗುಪ್ಸೆಗೊಂಡು ಸಾವನ್ನಪ್ಪಿರುವುದಾಗಿಯೂ ದೂರಿನಲ್ಲಿ ವಿವರಿಸಲಾಗಿತ್ತು. ಮೊದಲು ಪೊಲೀಸರು ಪತ್ನಿಯ ಹೇಳಿಕೆಯಂತೆಯೇ ದೂರನ್ನು ದಾಖಲಿಸಿದ್ದರು.
ಮೃತದೇಹದ ಮೇಲೆ ಗಾಯ ಕಂಡು ಸಹೋದರಿಗೆ ಶುರುವಾಯಿತು ಅನುಮಾನ!
ನಾಗರಾಜ ಅವರ ಸಾವಿನ ಸುದ್ದಿ ತಿಳಿದು ಅವರ ಸಹೋದರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಳಗೋಡು ಮಾಲ್ವೆ ಗ್ರಾಮದ ನಿವಾಸಿ ನಾಗರತ್ನ ಆಗಮಿಸಿದ್ದರು. ಅವರು ಹಾಗೂ ಸಂಬಂಧಿಕರು ಶವಗಾರದಲ್ಲಿರುವ ಮೃತದೇಹವನ್ನು ಪರೀಕ್ಷಿಸಿದಾಗ ಮೃತದೇಹದ ಮೈ ಮೇಲೆ ಹಾಗೂ ಕುತ್ತಿಗೆ ಭಾಗಗಳಲ್ಲಿ ಗಾಯಗಳಾಗಿತ್ತು. ಅಲ್ಲದೇ ನಾಗರಾಜ್ ಕೆಲ ದಿನಗಳ ಹಿಂದೆ ಸಹೋದರಿಗೆ ಕರೆ ಮಾಡಿ ಪತ್ನಿ ಮತ್ತು ಕೆಲವರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿ ಜೊತೆ ತಮ್ಮ ನೋವುಗಳನ್ನು ತೋಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಸಹೋದರಿ ನಾಗರತ್ನ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement. Scroll to continue reading.
ಪ್ರೀತಿಸಿ ಮದುವೆಯಾಗಿದ್ದ ನಾಗರಾಜ್-ಮಮತಾ!
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಗರಾಜ ಹಾಗೂ ಮಮತಾ ಅವರು ಕಳೆದ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ. ಇವರಿಗೆ ಮೂವರು ಮಕ್ಕಳು. ಬರಬರುತ್ತಾ ನಾಗರಾಜ ವಿಪರೀತ ಕುಡಿದು, ಮನೆಯಲ್ಲಿ ದಿನಾಲೂ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಇವರಿಬ್ಬರ ಸಂಸಾರದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ಕೊಲೆ ನಡೆಯಲು ನಿಜವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
Advertisement. Scroll to continue reading.