ಕರಾವಳಿ

ಉಡುಪಿ : ಅ. 28 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತೆಗಳ ಗಾಯನ

0

ಉಡುಪಿ: ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅತ್ಯಂತ ವೈಶಿಷ್ಠ ಪೂರ್ಣವಾಗಿ ಆಚರಿಸುವ ಕುರಿತಂತೆ ಅಕ್ಟೋಬರ್ 28 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ಹಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅವರು ಇಂದು ವರ್ಚುವಲ್ ಸಭೆಯ ಮೂಲಕ ಎಲ್ಲಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಶ್ರೀ ಕೃಷ್ಣ ಮಠ, ಮಲ್ಪೆ ಬೀಚ್, ಸೀ ವಾಕ್, ಕಾರ್ಕಳದ ಜೈನ ಬಸದಿ, ಗೊಮ್ಮಟ ಬೆಟ್ಟ, ವರಂಗ, ಮುಂತಾದ ಪ್ರದೇಶಗಳಲ್ಲಿ ಸಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.
ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್, ಕಾಪು ಲೈಟ್ ಹೌಸ್ ಬಳಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಬೋಟ್ ಗಳಲ್ಲಿ ಮೀನುಗಾರರಿಂದ, ಮೆಸ್ಕಾಂ ವತಿಯಿಂದ ಲೈನ್ ಮೆನ್ ಗಳ ಮೂಲಕ ಕೈಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಕೈಗಾರಿಕೆಗಳಲ್ಲಿ, ಗೇರು ಬೀಜ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಂದ, ಅರಣ್ಯ ಇಲಾಖೆವತಿಯಿಂದ ಅರಣ್ಯ ರಕ್ಷಕರಿಂದ ಅರಣ್ಯದಲ್ಲಿ, ಟ್ರೀ ಪಾರ್ಕ್‍ಗಳಲ್ಲಿ, ಮುಜರಾಯಿ ಇಲಾಖೆವತಿಯಿಂದ ಕೊಲ್ಲೂರು, ಮಂದಾರ್ತಿ, ಆನೆಗುಡ್ಡೆ ದೇವಸ್ಥಾನಗಳ ಮುಂಭಾಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರಕಾರ್ಮಿಕರನ್ನು ಒಳಗೊಂಡ ಕಾರ್ಯಕ್ರಮ ರೂಪಿಸುವಂತೆ ಎಲ್ಲಾ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಆಯೋಜಿಸುವಂತೆ ಪ್ರೌಢ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ, ಹಾಗೂ ಮಾಹೆ ಸಂಸ್ಥೆಯಲ್ಲೂ ಸಹ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿ, ಜಿಲ್ಲೆಯ ಎಲ್ಲಾ ಪ್ರಮುಖ ಬ್ಯಾಂಕ್ ಗಳಲ್ಲಿ ಸಿಬ್ಬಂದಿಗಳಿಂದ ಕನ್ನಡ ಗೀತೆಗಳನ್ನು ಹಾಡಿಸಿ ಎಂದರು.
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಹ ಕನ್ನಡ ಗೀತೆಗಳನ್ನು ಹಾಡುವಂತೆ ತಿಳಿಸಿದ ಅವರು ಈ ಕುರಿತಂತೆ 2 ಮೊದಲು ರಿಹರ್ಸಲ್ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎಲ್ಲಾ ಸಿಬ್ಬಂದಿಗಳೂ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸೇರಿ ಹಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.
ಉಡುಪಿ ನಗರಸಭೆಯಿಂದ ಪೌರ ಕಾರ್ಮಿಕರು, ಸಿಬ್ಬಂದಿ ಮತ್ತು ನಗರಸಭಾ ಸದಸ್ಯರು ನ್ನು ಒಳಗೊಂಡ 3 ತಂಡಗಳನ್ನು ರಚಿಸಿಕೊಂಡು ಹಾಡಲು ವ್ಯವಸ್ಥೆ ಮಾಡಿಕೊಳ್ಳುವುವಾಗಿ ನಗರಸಭೆ ಅಧಿಕಾರಿಗಳು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಕನ್ನಡ ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಲ್ಪೆಯಲ್ಲಿ 100 ಮಂದಿ ಕಲಾವಿದರು ಬೋಟ್ ನಲ್ಲಿ ತೆರಳಿ ಸಮುದ್ರದಲ್ಲಿ ಹಾಡಲು ಮತ್ತು ಕೋಟ ಶಿವರಾಮ ಥೀಂ ಪಾರ್ಕ್‍ನಲ್ಲಿ ಸಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಕ್ಟೋಬರ್ 28 ರಂದು ಜಿಲ್ಲೆಯಾದ್ಯಂತ ನಡೆಯುವ ಕಾರ್ಯಕ್ರಮಗಳ ಸಂಪೂರ್ಣ ದಾಖಲೀಕರಣ ಕಾರ್ಯವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುವಂತೆ ಹಾಗೂ ಮಲ್ಪೆಯಲ್ಲಿ ಬೋಟ್ ನಡೆಯುವ ಕಾರ್ಯಕ್ರಮದಲ್ಲಿ ಸುರಕ್ಷಾ ಸಾಧನಗಳನ್ನು ಧರಿಸಿಕೊಂಡು ಕಾರ್ಯಕ್ರಮ ಆಯೋಜಿಸುವಂತೆ ಮತ್ತು ಎಲ್ಲಾ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com