ಕರಾವಳಿ

ದಿಕ್ಸೂಚಿ ನ್ಯೂಸ್ ವಿಶೇಷ ವರದಿ: ಕೊರವಡಿ ಮೀನುಗಾರಿಕಾ ರಸ್ತೆಯ ಕಾಂಕ್ರೀಟಿಕರಣಕ್ಕೆ ಬೇಡಿಕೆ; ಹಳ್ಳದಂತಾಗಿದೆ ರಸ್ತೆ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಕೊರವಡಿ ಕ್ರಾಸ್‍ನಿಂದ ಹೊಳೆಕಟ್ಟು-ಮೂಡುಬೆಟ್ಟು ಕೊರವಡಿ ಸಂಪರ್ಕ ಕಲ್ಪಿಸುವ ಮೀನುಗಾರಿಕಾ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಸಂಚಾರಕ್ಕೆ ದುಸ್ತರವಾಗಿದೆ.
ಕರಾವಳಿ ತೀರ ಪ್ರದೇಶಗಳಾದ ಕೋಟ-ಪಡುಕರೆ, ಮಣೂರು, ಕೊಮೆ, ಕೊರವಡಿಯ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಈ ರಸ್ತೆಯು ರಿಂಗ್‍ರೋಡ್‍ನಂತೆ ಸಂರ್ಪಕಿಸುತ್ತದೆ. ಈ ಭಾಗದಲ್ಲಿ ಪ್ರವಾಸಿ ತಾಣಗಳು ಹಾಗೂ ಪ್ರಸಿದ್ಧ ದೇವಾಲಯಗಳು, ಬೀಚ್ ಸೇರಿದಂತೆ ಅನೇಕ ವಿದ್ಯಾಸಂಸ್ಥೆ, ಮೀನುಗಾರಿಕೆಗೆ ಸಂಬಂಧಿಸಿದ ಪ್ಯಾಕ್ಟರಿಗಳು, ಸಹಕಾರಿ ಸಂಘಗಳು, ಹಲವು ಉದ್ಯಮ ಕೇಂದ್ರಗಳಿವೆ. ಹಾಗಾಗಿ ಪ್ರತಿದಿನ ನೂರಾರು ಮಂದಿ ಸ್ಥಳೀಯರು, ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಇದಲ್ಲದೇ ಘನವಾಹನಗಳು ಹೆಚ್ಚಾಗಿ ತಿರುಗಾಡುತ್ತಿದ್ದು, ಖಾಸಗಿ ವಾಹನಗಳು ಸೇರದಂತೆ ದಿನನಿತ್ಯ ಒಡಾಟ ಮಾಡುವ ಬಸ್ಸುಗಳ ಸಂಚಾರಕ್ಕೂ ಹೊಂಡ ಗುಂಡಿಗಳಿಂದ ದಕ್ಕೆಯಾಗುತ್ತಿದೆ.

ಅಸಮರ್ಪಕ ಚರಂಡಿ ವ್ಯವಸ್ಥೆ :

ಸಮರ್ಪಕವಾದ ಚರಂಡಿ ವ್ಯವಸ್ಥೆಗಳಿಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿಯುವ ತೋಡುಗಳು ಗಿಡಗಂಟಿಗಳಿಂದ ಮುಚ್ಚಿಹೋಗಿದ್ದು ಹರಿಯುವ ನೀರಿಗೂ ತೊಡಕಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಹರಿದು ಬರುವ ಮಳೆಗಾಲದ ನೀರು ಒಂದೇ ಸಮನೆ ಹರಿದು ಬಂದು ರಸ್ತೆಯನ್ನೇ ಅಕ್ರಮಿಸಿಕೊಂಡು ಇದರಿಂದ ಸ್ಥಳೀಯರಿಗೆ ಮತ್ತಷ್ಟು ಕಟಂಕವಾಗಿದೆ. ಸ್ಥಳೀಯ ಉದ್ಯಮಿಗಳ ಸಹಕಾರದಿಂದ ಹೊಂಡ ಗುಂಡಿಗಳಿಗೆ ಹಾಕಲಾದ ಜಲ್ಲಿ ಕಲ್ಲಿನ ಮೇಲೆ ಯಾವುದೇ ಡಾಂಬರು ಮತ್ತು ಮಣ್ಣುಗಳನ್ನು ಹಾಕದೇ ವಾಹನ ಸವಾರರಿಗೂ ಮತ್ತು ವಾಹನಗಳಿಗೂ ಸಮಸ್ಯೆಯಾಗಿ ಕಾಡುತ್ತಿದೆ. ವಾಹನಗಳ ದಟ್ಟಣೆಯಿಂದ ರಸ್ತೆಗೆ ಹಾಕಲಾದ ಕಲ್ಲುಗಳು ಸಮೀಪದ ಮನೆಗಳಿಗೆ ದಾರಿಹೋಕರಿಗೆ ಸಿಡಿಯುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

Advertisement. Scroll to continue reading.

ಈ ರಸ್ತೆಯು ಕರಾವಳಿ ಭಾಗದ ಪ್ರಮುಖ ಮೀನುಗಾರಿಕಾ ರಸ್ತೆಯಾಗಿದೆ. ಈ ಭಾಗದ ಎಲ್ಲಾ ಮೀನುಗಾರಿಕಾ ರಸ್ತೆಗಳು ಕಾಂಕ್ರೀಟಿಕರಣಗೊಂಡಿವೆ. ಕುಡಿಯುವ ನೀರಿನ ಯೋಜನೆಗಾಗಿ ಪೈಪ್‍ಲೈನ್ ಅಳವಡಿಕೆಯ ನೆಪದಲ್ಲಿ ರಸ್ತೆಯು ಸಾಕಷ್ಟು ಹಾನಿಯಾಗಿದ್ದು ಸಂಚಾರಕ್ಕೆ ತೊಡಕಾಗಿದೆ. ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ರಿಕ್ಷಾ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಈ ಪರಿಸರದಲ್ಲಿ ಬೇರೆ ಬೇರೆ ಉದ್ಯಮಗಳು ನೆಲೆ ನಿಂತು ಬೆಳೆಯುತ್ತಿರುವ ಗ್ರಾಮವಾಗಿರುವುದರಿಂದ ಭವಿಷ್ಯದ ದೃಷ್ಟಿಯಲ್ಲಿ ರಸ್ತೆಯನ್ನು ಅಗಲೀಕರಣಗೊಳಿಸಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡಿಸಿದರೇ ಶಾಶ್ವತ ಪರಿಹಾರ ಕಾಣಲು ಸಾಧ್ಯವಿದೆ.
ರವೀಶ್ ಕೊರವಡಿ, ಸ್ಥಳೀಯರು

ಹಲವು ವರ್ಷಗಳಿಂದ ರಸ್ತೆಯ ನಾಮಾವಶೇಷಗಳನ್ನು ಕಾಣುತ್ತಿದ್ದೇವೆ. ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಯಾವುದೇ ಒಳ ಚರಂಡಿಯ ವ್ಯವಸ್ಥೆ ಇಲ್ಲದಿರುವುದರಿಂದ ಹಲವು ಕಡೆಗಳಲ್ಲಿ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ. ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಎಲ್ಲ ವರ್ಗದ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದೇವೆ. ಮೀನುಗಾರಿಕಾ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.ದಿನೇಶ್ ಉಪಾಧ್ಯಾಯ, ರಸ್ತೆ ಅಭಿವೃದ್ಧಿ ಹೋರಾಟಗಾರರು, ಕೊರವಡಿ

ಈ ರಸ್ತೆಯು ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿದ್ದರೂ ಇದು ಮೀನುಗಾರಿಕಾ ರಸ್ತೆಯಾಗಿರುವ ಕಾರಣದಿಂದ ನಮ್ಮಲ್ಲಿ ಯಾವುದೇ ಅನುದಾನ ಬಳಸಿಕೊಳ್ಳಲು ಸಾಧ್ಯವಿಲ್ಲ. ಈ ಕುರಿತು ಈಗಾಗಲೇ ಶಾಸಕರಿಗೆ ಮತ್ತು ಮೀನುಗಾರಿಕಾ ಇಲಾಖೆಗಳಿಗೆ ಪ್ರಾಸ್ತಾವನೆ ಕಳುಹಿಸಲಾಗಿದೆ. ಸ್ಥಳೀಯ ಬಂಗೇರ ಒವರ್‍ಸೀಸ್ ಫ್ಯಾಕ್ಟರಿಯವರ ಸಹಕಾರದೊಂದಿಗೆ ತಾತ್ಕಾಲಿಕವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಹೊಂಡಗಳಿಗೆ ಜಲ್ಲಿಕಲ್ಲುಗಳನ್ನು ತುಂಬಿ ರಿಪೇರಿ ಮಾಡಲಾಗಿದೆ.
ಜಯರಾಮ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಕುಂಭಾಸಿ

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com