ಕೋಟ: ರಾಜ್ಯ ಸರಕಾರದ ರಾಜ್ಯಾದ್ಯಂತ ಹಮ್ಮಿಕೊಂಡ ಕನ್ನಡ ನಾಡು ನುಡಿ ಉಳಿಸುವ ನಿಟ್ಟಿನಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತಾಡ್ ಮಾತಾಡ್ ಕನ್ನಡ ಎಂಬ ವಿನೂತನ ಕಾರ್ಯಕ್ರಮ ಗುರುವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸ.ಪ್ರ.ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಕನ್ನಡ ಭಾಷಾಭಿಮಾನ, ಸಂಸ್ಕ್ರತಿಯ ಅನಾವರಣಕ್ಕೆ ಸರಕಾರದ ಮಾರ್ಗಸೂಚಿ ಸಹಕಾರಿಯಾಗಲಿದೆ.ನಮ್ಮ ಮನೆ,ಮನಗಳಲ್ಲಿ ಭಾಷೆಯ ಜೈಕಾರ ಮೊಳಗಿಸೋಣ ಎಂದು ಶುಭಹಾರೈಸಿದರು.
ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಜಯಂತಿ ಪೂಜಾರಿ,ಕಾಲೇಜಿನ ಭೋದಕರಾದ ರವಿಪ್ರಸಾದ್ ಕೆ.ಜಿ ,ನಾಗರಾಜ್ ವೈದ್ಯ, ಪ್ರಶಾಂತ್ ನಿಲಾವರ,ರಾಜಣ್ಣ ಎಂ, ಮುರುಳಿ ಎಸ್,ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಸ್ವಾಗತಿಸಿದರು. ಕಾಲೇಜಿನ ಗ್ರಂಥಪಾಲಕ ಕೃಷ್ಣ ಸಾಸ್ತಾನ ಗೀತಾ ಗಾಯನಕ್ಕೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಿಂದ ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವಾ ಗೀತೆಗಳನ್ನು ಹಾಡಲಾಯಿತು.