ಕರಾವಳಿ

ಕೋಟ : ಮಾಧ್ಯಮ ಸಂವಾದ: ಕಂದಾಯ ಇಲಾಖೆ ಸಮಸ್ಯೆಗಳ ಕುರಿತು ಚರ್ಚೆ; ದಾಖಲೆ ತಿದ್ದುಪಡಿ ಅಧಿಕಾರ ತಹಶೀಲ್ದಾರರಿಗೆ ನೀಡಲು ಆಗ್ರಹ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ಬ್ರಹ್ಮಾವರ ಮದರ್ ಪ್ಯಾಲೇಸ್ ಮಿನಿಸಭಾಂಗಣದಲ್ಲಿ ಜರಗಿತು.
ಬ್ರಹ್ಮಾವರ ತಹಶೀಲ್ದಾರ್ ರಾಜ ಶೇಖರ್ ಮೂರ್ತಿ ಹಾಗೂ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದರು. ಇಲಾಖೆಗೆ ಸಂಬಂಧಿಸಿ ಸಾರ್ವಜನಿಕರಿಂದ ಸ್ವೀಕರಿಸಲಾದ ದೂರುಗಳನ್ನು ಸಂವಾದದಲ್ಲಿ ಪ್ರಸ್ತಾವಿಸಿ ಪ್ರತಿಕ್ರಿಯೆ ಪಡೆಯಲಾಯಿತು.
ದಾಖಲೆ ತಿದ್ದುಪಡಿ ಹಕ್ಕು ತಹಶೀಲ್ದಾರರಿಗೆ ನೀಡಿ:
ಕಂದಾಯ ಪಹಣಿ ಮುಂತಾದ ಪ್ರಮುಖ ದಾಖಲೆಯ ದೋಷಗಳನ್ನು ಸರಿಪಡಿಸುವ ಅಧಿಕಾರ ಈ ಹಿಂದೆ ತಹಶೀಲ್ದಾರರಿಗೆ ನೀಡಲಾಗಿತ್ತು. ಆದರೆ ಪ್ರಸ್ತುತ ಇದನ್ನು ಎ.ಸಿ.ಯವರಿಗೆ ನೀಡಲಾಗಿದೆ. ಎ.ಸಿ.ಯವರ ಕಾರ್ಯದೊತ್ತಡದಿಂದ ದಾಖಲೆ ಸರಿಪಡಿಸಲು ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ ಈ ಅಧಿಕಾರವನ್ನು ಮರಳಿ ತಹಶೀಲ್ದಾರಿಗೆ ನೀಡಬೇಕು. ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿಯವರು ಸಲಹೆ ನೀಡಿದರು. ಸರ್ವೆ ಇಲಾಖೆ ಮೇಲೆ ಈ ಹಿಂದೆ ತಹಶೀಲ್ದಾರರಿಗೆ ಅಧಿಕಾರವಿತ್ತು. ಆದರೆ ಪ್ರಸ್ತುತ ಇದನ್ನು ಪ್ರತ್ಯೇಕಗೊಳಿಸಿದ್ದರಿಂದ ಸಮಸ್ಯೆಯಾಗುತ್ತಿದೆ. ಹಿಂದಿನ ವ್ಯವಸ್ಥೆ ಮರಳಬೇಕು ಎಂದರು.

ಬಾರ್ಕೂರನ್ನು ಬ್ರಹ್ಮಾವರ ಹೋಬಳಿಗೆ ನೀಡಿ:
ಬಾರ್ಕೂರು ಪ್ರಸ್ತುತ ಕೋಟ ಹೋಬಳಿಯಲ್ಲಿದ್ದು ಪ್ರಾದೇಶಿಕವಾಗಿ ಈ ಪ್ರದೇಶ ಬ್ರಹ್ಮಾವರಕ್ಕೆ ಹತ್ತಿರದಲ್ಲಿದೆ. ಆದ್ದರಿಂದ ಇದನ್ನು ಬ್ರಹ್ಮಾವರ ಹೋಬಳಿಗೆ ಸೇರ್ಪಡೆಗೊಳಿಸಬೇಕು ಎಂದು ಸಾರ್ವಜನಿಕರೋರ್ವರ ಸಲಹೆಗೆ ತಹಶೀಲ್ದಾರರು ಉತ್ತರಿಸಿ, ಖಂಡಿತ ಅವಕಾಶವಿದೆ. ಈ ಕುರಿತು ಮನವಿ ಬಂದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

Advertisement. Scroll to continue reading.


ಸಮಸ್ಯೆ ತ್ವರಿತ ಇತ್ಯರ್ಥದ ಭರವಸೆ :
ವಾರಂಬಳ್ಳಿ ಮಠದಕೆರೆಯಲ್ಲಿ ರಸ್ತೆ, ಕೆರೆ ಒತ್ತುವರಿ ಬಗ್ಗೆ ಪ್ರದೀಪ್ ಅವರು ನೀಡಿದ ಮನವಿಗೆ, ರಸ್ತೆ ತಡೆ ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಶೀಘ್ರವಾಗಿ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಬಾರ್ಕೂರು ಸರಕಾರಿ ಆಸ್ಪತ್ರೆ ಸಮೀಪ ವಾಸವಿರುವ ಕುಟುಂಬ ಹಕ್ಕುಪತ್ರಕ್ಕಾಗಿ ಮಾಡಿದ ಮನವಿಗೆ ಹಾಗೂ ಆವರ್ಸೆಯ ರಾಮ ಎನ್ನುವವರು ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಯಾಗದ ಕುರಿತು ಕೇಳಿದ ಪ್ರಶ್ನೆಗೆ, ಬನ್ನಾಡಿಯಲ್ಲಿ ಬಡಕುಟುಂಬವೊಂದರ ವಸತಿ ಮನೆ ಕುಸಿದಾಗ ಘೋಷಣೆಯಾದ 5 ಲಕ್ಷ ಪರಿಹಾರ ಕೈ ಸೇರದ ಕುರಿತು ಕುಶ ಆಚಾರ್ಯ ಅವರು ಕೇಳಿದ ಪ್ರಶ್ನೆಗೆ, ನಾಲ್ಕೂರಿನ ರಾಜೇಶ್ ಅವರ ಹಕ್ಕುಪತ್ರ ಸಮಸ್ಯೆ ಈ ಎಲ್ಲದರ ಬಗ್ಗೆ ವಿ.ಎ. ಮೂಲಕ ಪರಿಶೀಲಿಸಿ, ಅಗತ್ಯವಿದ್ದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಕಾವಡಿ ಗ್ರಾಮದ ಶಾಂತಿನಗರದಲ್ಲಿ ವಾಸಿಸುವ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ಹಕ್ಕುಪತ್ರ ಸಮಸ್ಯೆ ಕುರಿತು ಗ್ರಾ.ಪಂ. ಸದಸ್ಯ ಹರೀಶ್ ಶೆಟ್ಟಿಯವರು ಕೇಳಿದ ಪ್ರಶ್ನೆಗೆ, 2001ರ ಯಾವುದಾದರು ದಾಖಲೆಗಳನ್ನು ಸಲ್ಲಿಸಿದಲ್ಲಿ ಪ್ರಕರಣ ಇತ್ಯರ್ಥಕ್ಕೆ ಶೀಘ್ರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಹಂದಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿವೇಶನದ ಮನವಿಗೆ, ಸಂಘದ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ಭೇಟಿಯಾದರೆ ಕಡತ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಆರ್.ಟಿ.ಸಿಯಲ್ಲಿ ಜಾಗದ ವಿಸ್ತಿರ್ಣ ವ್ಯತ್ಯಾಸದ ಕುರಿತು ಶರತ್ ಶೆಟ್ಟಿ ಕೊತ್ತಾಡಿ, ನಾರಾಯಣ ಹಾಂಡ ಕೇಳಿದ ಪ್ರಶ್ನೆಗೆ, ಸಮಸ್ಯೆ ಪರಿಶೀಲಿಸುವುದಾಗಿ ತಿಳಿಸಿದರು. ಹೆಗ್ಗುಂಜೆಯಲ್ಲಿ ರಸ್ತೆ ಅತಿಕ್ರಮಣ ಕುರಿತು ರಮೇಶ್ ಅವರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಹಕ್ಕುಪತ್ರಕ್ಕಾಗಿ ಕೋರಿದ ಅರ್ಜಿ ಬಾಕಿ ಇದ್ದು ಇತ್ಯರ್ಥಗೊಳ್ಳುತ್ತಿದ್ದಂತೆ ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದರು. ಹೇರೂರು ಗ್ರಾಮದಲ್ಲಿ ಸರಕಾರಿ ಇಲಾಖೆಯೊಂದಿಗೆ ಮಂಜೂರಾದ ಜಾಗದಲ್ಲಿ 5 ಎಕ್ರೆ ಕೆರೆ ಒತ್ತುವರಿಯಾಗಿದೆ ಎಂದು ಗಿರೀಶ ಅಡಿಗ ತಿಳಿಸಿದಾಗ, ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಅಲ್ತಾರು ಪುಟ್ಟಿಗುಡ್ಡಿ ರಸ್ತೆ ಸಮಸ್ಯೆ ಬಗ್ಗೆ ಯಡ್ತಾಡಿ ಗ್ರಾ.ಪಂ.ಅಧ್ಯಕ್ಷೆ ಲತಾ ಅವರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಕೋರ್ಟ್ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


ಕೋಟ ಜನಸ್ನೇಹಿ ಕೇಂದ್ರಕ್ಕೆ ಸಿಬಂದಿಗೆ ಕ್ರಮ:
ಕೋಟದ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಸಿಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆ ಕುರಿತು ಜಯಂತ್ ಅಮೀನ್ ಕೇಳಿದ ಪ್ರಶ್ನೆಗೆ, ಶೀಘ್ರವಾಗಿ ಹೆಚ್ಚುವರಿ ಸಿಬಂದಿ ನಿಯೋಜಿಸುವುದಾಗಿ ತಿಳಿಸಿದರು ಹಾಗೂ ಸಾಲಿಗ್ರಾಮದ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ಆಗುತ್ತಿರುವ ಸಮಸ್ಯೆ ಬಗ್ಗೆ ನಾಗರಾಜ್ ಗಾಣಿಗ ಅವರು ಕೇಳಿದ ಪ್ರಶ್ನೆಗೆ, ಸ್ವಂತ ಕಟ್ಟಡಕ್ಕೆ 32ಸೆಂಟ್ಸ್ ಜಾಗ ಮೀಸಲಿರಿಸಲಾಗಿದ್ದು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುತ್ತೇವೆ. ಕಟ್ಟಡ ಆಗುವ ತನಕ ಸುವ್ಯವಸ್ಥಿತ ಬಾಡಿಗೆ ಕಟ್ಟಡ ಲಭ್ಯತೆ ಬಗ್ಗೆ ಪರಿಶೀಲಿಸುತ್ತೇವೆ ಎಂದರು.


ಹೆಚ್ಚುವರಿ ಗ್ರಾಮಲೆಕ್ಕಾಧಿಕಾರ ನೇಮಕ:
ಗ್ರಾಮಲೆಕ್ಕಾಧಿಕಾರಿಗಳ ಕೊರತೆ ಕುರಿತು ರಾಘವೇಂದ್ರ ಐರೋಡಿ ಕೇಳಿದ ಪ್ರಶ್ನೆಗೆ, ಜಿಲ್ಲೆಗೆ 15 ವಿ.ಎ. ನೇಮಕಾತಿ ಆಗಿದೆ. ಅದರಲ್ಲಿ ಹೆಚ್ಚಿನ ಸಿಬಂದಿಗಳನ್ನು ಬ್ರಹ್ಮಾವರಕ್ಕೆ ಕೋರಲಾಗುವುದು ಎಂದರು.
ಸರಕಾರಿ ಜಾಗ ಒತ್ತುವರಿಗೆ ಪ್ರಕರಣ ದಾಖಲಿಸುವ ಅವಕಾಶವಿದ್ದು ಬ್ರಹ್ಮಾವರದಲ್ಲಿ ಪ್ರಕರಣ ದಾಖಲಾದ ಉದಾಹರಣೆ ಇಲ್ಲ ಈ ಬಗ್ಗೆ ಪರಿಶೀಲಿಸಬೇಕು ಎಂದು ಸದಾಶಿವ ಶೆಟ್ಟಿ ತಿಳಿಸಿದರು. ಅಲ್ವಿನ್ ಅಂದ್ರಾದೆ ಹಾಗೂ ಅಭಿಜಿತ್ ಪಾಂಡೇಶ್ವರ ಅವರು, ಕನ್‍ವರ್ಷ್‍ನ್ ಆದ ಜಾಗ ವಿಂಗಡಿಸುವುದಕ್ಕೆ ಅವಕಾಶ ನೀಡಬೇಕು ಎಂದರು. ಸಿ.ಆರ್.ಝಡ್. ಸಮಸ್ಯೆ ಬಗ್ಗೆ ಉಪ್ಪೂರು ಲಕ್ಷ್ಮಣ ಗಾಣಿಗ ಕೇಳಿದ ಪ್ರಶ್ನೆಗೆ ಪರಿಶೀಲಿಸುವುದಾಗಿ ತಿಳಿಸಿದರು. ಜನನ ಮರಣ ಪ್ರಮಾಣ ಪತ್ರ ಶೀಘ್ರ ನೀಡಬೇಕು, ತಾಲೂಕು ಕಚೇರಿ, ಜನಸ್ನೇಹಿ ಕೇಂದ್ರದ ಸಿಬಂದಿಗಳು ಇನ್ನಷ್ಟು ಜನಸ್ನೇಹಿಯಾಗಿ ಸೇವೆ ನೀಡಬೇಕು ಎಂದು ರವೀಂದ್ರ ತಿಂಗಳಾಯ ಮುಂತಾದವರು ಸಲಹೆ ನೀಡಿದರು. ಭೂಮಿ ಕೇಂದ್ರ ಸರ್ವರ್ ಸಮಸ್ಯೆ ಕುರಿತು ಅಜಿತ್ ಭಂಡಾರಿ ಅಚ್ಲಾಡಿ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಪರಿಹಾರ ಕ್ರಮಗಳಾಗುತ್ತಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಕಂದಾಯ ಅ„ಕಾರಿ ರಾಜು, ಲಕ್ಷ್ಮೀನಾರಾಯಣ ಭಟ್, ಉಪತಹಶೀಲ್ದಾರ ದೇವಕಿ, ರಾಘವೇಂದ್ರ ಉಪಸ್ಥಿತರಿದ್ದರು.

ತಾಯಿಯ ಜಾತಿ ಸೇರ್ಪಡೆಗೂ ಅವಕಾಶ :
ನನ್ನ ತಂದೆ ಎಸ್.ಸಿ., ತಾಯಿ ಬಿಲ್ಲವರು. ನಾನು ಹುಟ್ಟಿನಿಂದ ತಂದೆಯಿಂದ ಬೇರೆಯಾಗಿ ತಾಯಿ ಕುಟುಂಬದೊಂದಿಗೆ ಬದುಕುತ್ತಿದ್ದೇನೆ. ನಾನು ತಾಯಿಯ ಜಾತಿ ಪ್ರಮಾಣ ಪತ್ರ ಪಡೆಯಲು ಅವಕಾಶವಿದೆಯೇ ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ, ಈ ರೀತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ನಾಗಪುರ ಸರ್ವೋಚ್ಛ ನ್ಯಾಯಾಲಯ ವಿಶೇಷ ಸಂದರ್ಭಗಳಲ್ಲಿ ಮಗುವಿಗೆ ತಾಯಿಯ ಜಾತಿಯ ಪ್ರಮಾಣಪತ್ರ ನೀಡಬಹುದು ಎನ್ನುವುದಾಗಿ ತೀರ್ಪು ನೀಡಿದೆ. ವಿದ್ಯಾರ್ಥಿನಿ ನನ್ನ ಭೇಟಿಯಾಗಿ ಮನವಿ ಸಲ್ಲಿಸಿದರೆ ಜಿಲ್ಲಾಧಿಕಾರಿಗಳಿಗೆ ಕಾನೂನು ಪ್ರಕಾರ ಮನವಿ ಸಲ್ಲಿಸಿ ಪ್ರಮಾಣಪತ್ರ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.

Advertisement. Scroll to continue reading.

ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿ, ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಮೋಹನ್ ಉಡುಪ ವಂದಿಸಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com