ಕುಂದಾಪುರ : ಅಂಬೇಡ್ಕರ್ ಕಾಲನಿಗೆ ಸಚಿವ ಕೋಟ ಭೇಟಿ; ಪರಿಶೀಲನೆ
Published
0
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಅಂಬೇಡ್ಕರ್ ಕಾಲನಿಯ ಪರಿಶಿಷ್ಟ ಪಂಗಡ ಕುಟುಂಬಗಳ 15 ಮನೆಗಳು ಅಪೂರ್ಣಗೊಂಡಿದ್ದು, ಮೂರ್ನಾಲ್ಕು ಮನೆಗಳು ಪೂರ್ಣಪ್ರಮಾಣದಲ್ಲಿ ಆಗಿವೆ. ಪೂರ್ಣಗೊಂಡ ಮನೆ ನಿರ್ಮಾಣದ ಕೊನೆಯ ಕಂತು ಬರಬೇಕಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ವಸತಿ ಇಲಾಖೆಯೊಂದಿಗೆ ಮಾತನಾಡಿದ್ದು, 15 ದಿನಗಳಲ್ಲಿ ಖಾತೆಗೆ ಹಣ ವರ್ಗಾಯಿಸುವ ಕೆಲಸ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕುಂದಾಪುರ ಪುರಸಭಾ ವ್ಯಾಪ್ತಿಯ ಅಂಬೇಡ್ಕರ್ ಕಾಲನಿಗೆ ಭೇಟಿ ನೀಡಿದ ವೇಳೆಯಲ್ಲಿ ಮಾತನಾಡಿದರು.
Advertisement. Scroll to continue reading.
ಇನ್ನು ಬಾಕಿ ಉಳಿದ 9 ರಿಂದ 10 ಮನೆಗಳಿಗೆ ಯಾವುದಾದರೂ ಮೂಲದಿಂದ ಪ್ರಥಮ ಹಂತದಲ್ಲಿ ಎರಡು ಮೂರು ಮನೆಗಳನ್ನು ತೆಗೆದುಕೊಳ್ಳಲು ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಪೂರ್ಣಗೊಂಡ ಬಳಿಕ ಅವರ ಖಾತೆಗೆ ಹಣ ಬರಲಿದೆ. ಬಳಿಕ ಕಾಮಗಾರಿಗಳನ್ನು ಪೂರ್ತಿಗೊಳಿಸಬೇಕು ಎಂದು ತಿಳಿಸಿದರು.
ನಿಯಮದನ್ವಯ ಫಲಾನುಭವಿಗಳೇ ಮನೆ ನಿರ್ಮಾಣ ಮಾಡಬೇಕು. ಹೊರಗುತ್ತಿಗೆಗೆ ಅವಕಾಶ ಇಲ್ಲ. ಹೊರಗುತ್ತಿಗೆ ಕೊಟ್ಟರೂ ಗುಣಮಟ್ಟದ ಕೆಲಸ ಮಾಡಲಾಗುತ್ತದೆ ಎಂಬ ನಂಬಿಕೆ ಫಲಾನುಭವಿಗಳಲ್ಲಿ ಇರುವುದಿಲ್ಲ. ಆ ಕಾರಣಕ್ಕಾಗಿ ಮೂರೂವರೆ ಲಕ್ಷದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆಲವೆಡೆ ಗೋಡೆ, ಅಡಿಪಾಯ ಹಾಕಿದಾಗ ಅದಕ್ಕೆ ಪಾವತಿ ಮಾಡಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಫಲಾನುಭವಿಗಳ ಬಳಿ ಹಣದ ಶಕ್ತಿ ಇರುವುದಿಲ್ಲ. ಆ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಎರಡು ಮೂರು ಮನೆಗಳನ್ನು ತೆಗೆದುಕೊಳ್ಳಲು ಹೇಳಲಾಗಿದೆ. 6 ತಿಂಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದರು.
ಆರು ಮನೆಗಳ ಹಕ್ಕು ಪತ್ರ ಮಂಜೂರು ಮಾಡುವ ಕೆಲಸ ಮಾಡಲಿದ್ದೇವೆ. ಈ ಭಾಗದಲ್ಲಿರುವ ಚರಂಡಿ ವಿಸ್ತರಿಸಿ, ನಡೆದಾಡಲು ಯೋಗ್ಯವಾಗಿಸಲು ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಸಾಂಪ್ರದಾಯಿಕ ಕಂಬಳಕ್ಕೆ ಕ್ರೀಡಾ ಇಲಾಖೆ 1 ಲಕ್ಷ ಕೊಡುತ್ತಿದ್ದು, ಈ ಬಾರಿಯೂ ಮುಂದುವರೆಯಬಹುದು ಎಂದು ಅವರು ಹೇಳಿದರು.
ಈ ವೇಳೆಯಲ್ಲಿ ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಸದಸ್ಯರಾದ ಪ್ರಭಾಕರ, ನಾಮನಿರ್ದೇಶಿತ ಸದಸ್ಯ ರತ್ನಾಕರ್, ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್, ಬಿಜೆಪಿ ಮುಖಂಡ ಸದಾನಂದ ಉಪ್ಪಿನಕುದ್ರು, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಘವೇಂದ್ರ ವರ್ಣೇಕರ್, ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ನರಸಿಂಹ ಪೂಜಾರಿ, ಪುರಸಭೆಯ ವಸತಿ ಯೋಜನೆ ಅಧಿಕಾರಿ ಗಣೇಶ್ ಜನ್ನಾಡಿ ಮೊದಲಾದವರು ಇದ್ದರು.