ಬ್ರಹ್ಮಾವರ : ಬೆಳಕಿನ ಹಬ್ಬಕ್ಕೆ ಗ್ರಾಹಕರಿಗೆ ಉಚಿತ ಎಣ್ಣೆ ನೀಡುತ್ತಿದ್ದಾರೆ ಮಿಲ್ ಮಾಲಕರು; 25 ವರ್ಷದಿಂದ ನಡೆಯುತ್ತಿದೆ ಈ ಕಾರ್ಯ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೀಪಾವಳಿ ಅಂದರೆ ಬೆಳಕಿನ ಹಬ್ಬ. ಹಣತೆಗಳನ್ನು ಹಚ್ಚಿ ಸಂಭ್ರಮಿಸುವ ಹಬ್ಬ. ತೈಲ ಬೆಲೆ ವಿಪರೀತ ಇದ್ದರೂ ಕೂಡಾ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಉಚಿತ ತೈಲವನ್ನು ನೀಡುವ ವ್ಯಕ್ತಿಯೊಬ್ಬರು ಬ್ರಹ್ಮಾವರದಲ್ಲಿದ್ದಾರೆ. ಬ್ರಹ್ಮಾವರ ಭಾಗದಲ್ಲಿ ಪ್ರಥಮವಾಗಿ 30 ವರ್ಷದ ಹಿಂದೆ ತೆಂಗಿನ ಕಾಯಿಯಿಂದ ಯಾಂತ್ರಿಕೃತವಾಗಿ ತೈಲವನ್ನು ತಯಾರು ಮಾಡುವ ಎಣ್ಣೆ ಮಿಲ್ ವೊಂದು ಇಲ್ಲಿನ ರಥ ಬೀದಿಯಲ್ಲಿದೆ. ಇಲ್ಲಿನ ಪರಿಸರದ ಮಟಪಾಡಿ, ಹಂದಾಡಿ, ಚಾಂತಾರು, ಬಾರಕೂರು, ಕುಂಜಾಲು, ನೀಲಾವರ ಸೇರಿದಂತೆ ನಾನಾ ಭಾಗದ ತೆಂಗು ಬೆಳೆಗಾರರು ಮತ್ತು ಗ್ರಾಹಕರು ಇಲ್ಲಿ ತೆಂಗಿನ ಕಾಯಿ ಮತ್ತು ಇತರೆ ಎಣ್ಣೆಯನ್ನು ಕೊಡುವ ಕೊಳ್ಳುವ ವ್ಯವಹಾರ ಮಾಡಿಕೊಂಡಿದ್ದಾರೆ. ದೀಪಾವಳಿ ಸಮಯದಲ್ಲಿ ಇಲ್ಲಿನ ಮಿಲ್ ಮಾಲಿಕರದು ಒಂದು ವಿಶೇಷ ಬೋನಸ್ ಇಲ್ಲಿನ ಗ್ರಾಹಕರಿಗೆ. ದೀಪಾವಳಿ ಹಬ್ಬಕ್ಕೆ ಇವರಲ್ಲಿ ತಯಾರು ಮಾಡಿದ ದೀಪದ ಎಣ್ಣೆಯನ್ನು ಅರ್ಧ ಲೀಟರ್, ಒಂದು ಲೀಟರ್ ಎಣ್ಣೆಯನ್ನು ಉಚಿತವಾಗಿ ನೀಡುವುದು ಕಳೆದ 25 ವರ್ಷದಿಂದ ನೀಡುವ ಒಂದು ಬೋನಸ್. ಇದು ಯಾವೂದೇ ಗ್ರಾಹಕರು ಬೇಡಿಕೆ ಇಟ್ಟದ್ದಲ್ಲ ಮಿಲ್ ಮಾಲಕರದೇ ಒಂದು ವಿಭಿನ್ನ ಪರಿಕಲ್ಪನೆಯಾಗಿದೆ.
ಶುದ್ಧ ತೆಂಗಿನ ಎಣ್ಣೆ ತೆಗೆದ ಬಳಿಕ ಕೆಲವು ತೆಂಗಿನ ಕಾಯಿಗಳು ಹಾಳಾದವುಗಳು ಮತ್ತು ಜಿಡ್ಡು ಬರುವ ತೈಲ ಅಂಶ ಇರುವ ಕೊನೆಯ ಹಂತದ ಕಾಯಿಯಿಂದ ದೀಪಕ್ಕೆ ಹಾಕುವ ಎಣ್ಣೆಯನ್ನು ಮಾಡಿ ವರ್ಷಕ್ಕೆ ಒಮ್ಮೆ ಬರುವ ದೀಪಗಳ ಹಬ್ಬಕ್ಕೆ ಪ್ರಚಾರ ಇಲ್ಲದೆ ಕಳೆದ ಕೆಲವು ವರ್ಷದಿಂದಲೂ ಇಲ್ಲಿನ ಮಾಲಕರಾದ ಸೀತಾರಾಮ ಉಪಾಧ್ಯಾಯರು ತಮ್ಮಲ್ಲಿ ಬರುವ ಗ್ರಾಹಕರಿಗೆ ನೀಡುತ್ತಿರುವುದು ಬೆಳಕಿನ ಹಬ್ಬಕ್ಕೆ ಇವರು ನೀಡುವ ಕೊಡುಗೆ ವ್ಯವಹಾರ ಕ್ಷೇತ್ರಕ್ಕೆ ಮಾದರಿಯಾಗಿದೆ.