ವರದಿ : ದಿನೇಶ್ ರಾಯಪ್ಪನಮಠ
ತೆಕ್ಕಟ್ಟೆ : ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ (ರಿ.) ಕುಂಭಾಸಿ ಇದರ ೩ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಸಂಕಲನ – ೨೦೨೧ ಕಾರ್ಯಕ್ರಮ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಜಾನ್ ಡಿಸೋಜಾ, ಪ್ರಗತಿ ಪರ ಕೃಷಿಕ ಹೆರಿಯಣ್ಣ ಶೆಟ್ಟಿ ಯಡಾಡಿ ಮತ್ಯಾಡಿ ಹಾಗೂ ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ ಇಲ್ಲಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಅಶಕ್ತರಿಗೆ ಅರ್ಥಿಕ ನೆರವು ನೀಡಲಾಯಿತು.
ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾವು ಮಾಡುವ ಕಾರ್ಯದಲ್ಲಿ ಉತ್ಸಾಹ ಮತ್ತು ಇನ್ನಷ್ಟು ಕಾರ್ಯ ಮಾಡಲು ಸೂಚನೆ ನೀಡಲು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುತ್ತವೆ. ಪ್ರಕೃತಿಯ ವೈಪರಿತ್ಯದ ನಡುವೆ ಯಕ್ಷಗಾನ ಕ್ಷೇತ್ರಕ್ಕೆ ಪ್ರಕೃತಿಯೇ ಪರೋಕ್ಷವಾಗಿ ಲಾಕ್ಡೌನ್ ನೀಡುತ್ತಿದೆ. ಕಲೆ ಮತ್ತು ಸಂಸ್ಕೃತಿಗಳೇ ಬದುಕಿಗೆ ಟಾನಿಕ್ ಇದ್ದ ಹಾಗೆ, ಪ್ರಕೃತಿ ನಮಗೆ ಒಳ್ಳೆಯ ರಕ್ಷಣೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕಲೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಹ ಕಾರ್ಯಗಳನ್ನು ಕೊರ್ಗಿ ಟ್ರಸ್ಟ್ ನಿರಂತರವಾಗಿ ನಡೆಸಿಕೊಂಡು ಬಂದಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಹೇಳಿದರು.
Advertisement. Scroll to continue reading.
ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ (ರಿ.) ಕುಂಭಾಸಿ ಇದರ ಪ್ರವರ್ತಕ ಕೊರ್ಗಿ ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭವಾನಿ ವಿ.ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಕೆ. ಕೃಷ್ಣಪ್ರಸಾದ್ ಅಡ್ಯಂತಾಯ , ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹ ಇದರ ಮಾಲಕ ಕೆ.ರವಿರಾಜ್ ಉಪಾಧ್ಯಾಯ, ಶ್ರೀ ಸಿದ್ಧಿ ವಿನಾಯಕ ಕ್ಯಾಶ್ಯೂ ಕೆದೂರು ಇದರ ಮಾಲಕ ಉದ್ಯಮಿ ಅರುಣ್ ಕುಮಾರ್ ಶೆಟ್ಟಿ , ಚರ್ಮರೋಗ ತಜ್ಞ ಡಾ| ಅರುಣ್ ಶೆಟ್ಟಿ ಕೆ., ಹಾಗೂ ಟ್ರಸ್ಟ್ನ ಸದಸ್ಯರು ಉಪಸ್ಥಿತರಿದ್ದರು. ಕೆ.ರವಿರಾಜ್ ಉಪಾಧ್ಯಾಯ ಸ್ವಾಗತಿಸಿ, ಶ್ರೀ ಹಟ್ಟಿಯಂಗಡಿ ಮೇಳದ ವ್ಯವಸ್ಥಾಪಕ, ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ನಿರೂಪಿಸಿದರು.
ಶಿಕ್ಷಕ ಬಾಬು ಶೆಟ್ಟಿ , ರಾಜಗೋಪಾಲ ಪುರಾಣಿಕ್, ಪ್ರಶಾಂತ್ ಶೆಟ್ಟಿ ಉಳ್ತೂರು, ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ, ನಾಗರಾಜ್ ಪೂಜಾರಿ ಕೊರವಡಿ , ಗಣೇಶ್ ಕುಂಭಾಸಿ ಸಹಕರಿಸಿ, ರಾಜಗೋಪಾಲ ಪುರಾಣಿಕ್ ವಂದಿಸಿದರು. ತದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಹಟ್ಟಿಯಂಗಡಿ ಮೇಳದವರಿಂದ ಯಕ್ಷ ಗಾನ- ನಾಟ್ಯ- ಹಾಸ್ಯ ವೈಭವ ಪ್ರದರ್ಶನಗೊಂಡಿತು.
Advertisement. Scroll to continue reading.