ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಈ ವರ್ಷ ವಿಪರೀತ ಮಳೆಯ ಕಾರಣ ಕರಾವಳಿ ಭಾಗದಲ್ಲಿ ಭತ್ತವನ್ನು ಬೆಳೆದ ರೈತರು ಕಟಾವು ಮಾಡಲು ಅಸಾದ್ಯವಾಗಿ ಉತ್ತಮ ಇಳುವರಿ ಬಂದರೂ ಕೂಡಾ ಮಳೆಯ ಕಾರಣ ಕೈಗೆ ಬಂದುದು ಬಾಯಿಗೆ ಬರದಂತಾಗಿ 2 ನೇ ಬೆಳೆ ಸುಗ್ಗಿಯನ್ನು ಮಾಡುವ ಹುಮ್ಮಸ್ಸು ಕಂಡುಕೊಂಡಿದ್ದಾರೆ. ಒಂದೆಡೆಯಲ್ಲಿ ಭತ್ತವನ್ನು ಕಳೆದುಕೊಂಡು ಇನ್ನೊಂದೆಡೆಯಲ್ಲಿ ಜಾನುವಾರುಗಳ ಮೇವಿಗೆ ಹುಲ್ಲು ಇಲ್ಲದಂತಾಗಿ ರೈತ ಕಂಗೆಟ್ಟು ಮರಳಿ ಯತ್ನವ ಮಾಡುತ್ತಿದ್ದಾರೆ.
ಬಾರಕೂರು ಭಾಗದಲ್ಲಿ ನೀರಾವರಿ ಇರುವ ರೈತರು ಸುಗ್ಗಿ ಮಾಡುತ್ತಿದ್ದು ಕೆಲವಾರು ವರ್ಷದಿಂದ ಸುಗ್ಗಿ ಬೆಳೆಯನ್ನು ಮಾಡದ ತಗ್ಗು ಪ್ರದೇಶದಲ್ಲಿ ಈವರ್ಷ ಸುಗ್ಗಿ ಬೆಳೆ ತೆಗೆಯುವ ಸಿದ್ಧತೆ ಕಂಡು ಬರುತ್ತಿದೆ.
ಬಾರಕೂರು ಸೀತಾನದಿಗೆ ಅವಲಂಬನೆ ಇರುವ ಎಳ್ಳಂಪಳ್ಳಿ, ಕೂರಾಡಿ, ಹನೆಹಳ್ಳಿ, ಬಂಡೀಮಠ, ಕೂಡ್ಲಿ ಭಾಗದಲ್ಲಿ ಯಾಂತ್ರಿಕವಾಗಿ ಉಳುಮೆ ಮಾಡುವ ಕಾರ್ಯ ಕಂಡುಬರುತ್ತಿದೆ.
ಆದರೆ ಬಿತ್ತನೆ ಬೀಜದ ಸಮಸ್ಯೆ ಕೂಡಾ ಕಂಡು ಬಂದಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಬೀಜಗಳು ಬೇಡಿಕೆಗೆ ಅನುಗುಣವಾಗಿ ಬೀಜ ಇಲ್ಲದಿರುವುದು ಕೂಡಾ ರೈತರಿಗೆ ಸಮಸ್ಯೆ ತಂದಿದೆ.
ಆದರೂ, ದೂರದ ಹಲವಾರು ಭಾಗದಲ್ಲಿ ಬೀಜವನ್ನು ಪಡೆದು ಬಹುತೇಕ ಕಡೆಯಲ್ಲಿ ಉಳುಮೆ ಕಾರ್ಯ ಆಗುತ್ತಿದ್ದು, ಸುಗ್ಗಿ ಬೆಳೆಯುವ ಸಂಖ್ಯೆ ಜಾಸ್ತಿ ಕಂಡು ಬಂದಿದ್ದು, ಆಹಾರ ಉತ್ಪಾದನೆಯ ಕೃಷಿ ಕ್ಷೇತ್ರದಲ್ಲಿ ರೈತ ಸದಾ ಕಾರ್ಯನಿರತನಾಗಿದ್ದಾನೆ.
Advertisement. Scroll to continue reading.