ಮಂಗಳೂರು: ದೇಶವನ್ನೇ ತಲ್ಲಣಗೊಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣವನ್ನು ಭೇದಿಸಿದ್ದ ವಿಮಾನ ನಿಲ್ದಾಣದ ಸಿಐಎಸ್ಎಫ್ ಪಡೆಯ ಶ್ವಾನ ಲೀನಾ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ ಎಂಟು ವರ್ಷದಿಂದ ಸಿಐಎಸ್ಎಫ್ ಪಡೆಯೊಂದಿಗೆ ಲೀನಾ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು. ಲೀನಾ ಸ್ಫೋಟಕ ಪತ್ತೆ ಬಗ್ಗೆ ತರಬೇತಿಯನ್ನು ಪಡೆದಿತ್ತು.
ಲ್ಯಾಬ್ರಡಾರ್ ತಳಿಯ ಶ್ವಾನ ಲೀನಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಾರಣ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಭದ್ರತಾ ಸೇವೆಯಿಂದ ಕಳೆದ ಜೂನ್ 1 ರಿಂದ ಲೀನಾವನ್ನು ಸೇವೆಯಿಂದ ಮುಕ್ತಗೊಳಿಸಲಾಗಿತ್ತು.
ಲೀನಾ ಮೃತವಾದ ಹಿನ್ನಲೆಯಲ್ಲಿ ಮಂಗಳೂರಿನ ಸಿಐಎಸ್ಎಫ್ ಕಚೇರಿ ಆವರಣದಲ್ಲಿ ಡಿಟೆಕ್ಟಿವ್ ಲೀನಾಗೆ ಸಿಐಎಸ್ಎಫ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಸಿಐಎಸ್ಎಫ್ ಸಕಲ ಸರ್ಕಾರಿ ಗೌರವದೊಂದಿಗೆ ಲೀನಾಗೆ ಅಂತಿಮ ನಮನ ಸಲ್ಲಿಸಲಾಯಿತು. ಲೀನಾ ಸಾವಿಗೆ ಎಲ್ಲರೂ ದುಃಖಿತರಾಗಿದ್ದಾರೆ.