ಬೆಂಗಳೂರು : ಹಿರಿಯ ಸಿನಿಮಾ ನಿರ್ದೇಶಕ ಕೆ.ವಿ. ರಾಜು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕೆ.ವಿ. ರಾಜು ಅವರು ಇಂದು ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಬೆಳಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ :
Advertisement. Scroll to continue reading.
ಖ್ಯಾತ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದ ಕೆವಿ ರಾಜು, 1982 ರಲ್ಲಿ ‘ಬಾಡದ ಹೂ’ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು.
1984 ರ ‘ಒಲವೇ ಬದುಕು’ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ನಂತರ ಸಾಲು ಸಾಲು ಯಶಸ್ವಿ ಚಿತ್ರಗಳನ್ನು ನೀಡುವ ಮೂಲಕ ಜನಮನ್ನಣೆ ಪಡೆದರು.
ಸಂಗ್ರಾಮ (1987), ಬಂಧ ಮುಕ್ತ (1987), ಯುದ್ಧಕಾಂಡ (1989), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಮೂಲಕ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದರು.
ಅಮಿತಾಭ್ ಬಚ್ಚನ್ ಹಾಗೂ ಜಯಪ್ರದಾ ನಟನೆಯ 1991ರಲ್ಲಿ ತೆರೆಕಂಡ ‘ಇಂದ್ರಜಿತ್’ ಚಿತ್ರದ ಮೂಲಕ ಬಾಲಿವುಡ್ ಗೂ ಕೆವಿ ರಾಜು ಪ್ರವೇಶಿಸಿದ್ದರು.
Advertisement. Scroll to continue reading.
ಮತ್ತೆರಡು ಹಿಂದಿ ಚಿತ್ರಗಳಿಗೂ ಅವರು ಆಕ್ಷನ್ ಕಟ್ ಹೇಳಿದ್ದರು. ಕಾಲಾನಂತರದಲ್ಲಿ ರಾಜು ಅವರು ಸಂಭಾಷಣೆ ಹಾಗೂ ಬರಹಗಾರರಾಗಿ ಗುರುತಿಸಿಕೊಂಡರು. 2017ರಲ್ಲಿ ತೆರೆಗೆ ಬಂದ ಕನ್ನಡದ ‘ಟೈಗರ್ ಗಲ್ಲಿ’ ಚಿತ್ರಕ್ಕೆ ಅವರು ಚಿತ್ರಕತೆ ಹಾಗೂ ಸಂಭಾಷಣೆ ರಚಿಸಿದ್ದರು.