ಧಾರವಾಡ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಡೋಜ ಡಾ. ಚೆನ್ನವೀರ ಕಣವಿ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜನವರಿ 14 ರಂದು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಾಡೋಜ ಚೆನ್ನವೀರ ಕಣವಿ ದಾಖಲಾಗಿದ್ದರು.
ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
Advertisement. Scroll to continue reading.
ಪ್ರಾಥಮಿಕ, ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲೇ ಕಣವಿ ಪಡೆದರು. ಬಳಿಕ 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು.
1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು.
ಡಾ. ಚೆನ್ನವೀರ ಕಣವಿ ಅವರ ಮೊದಲ ಕವಲ ಸಂಕಲನ ‘ಕಾವ್ಯಾಕ್ಷಿ’ 1949ರಲ್ಲಿ ಬಿಡುಗಡೆಗೊಂಡಿತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ.
ಡಾ. ಚೆನ್ನವೀರ ಕಣವಿ ಸಾಹಿತ್ಯ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದರು. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಂಪಿ ವಿಶ್ವವಿದ್ಯಾಲಯ ನಾಡೋಜ ಪಶಸ್ತಿ ನೀಡಿ ಗೌರವಿಸಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು
Advertisement. Scroll to continue reading.