ಸಾಹಿತ್ಯ

ಶಂಕರ ಶಿವಪ್ಪ ತುಮ್ಮಣನವರರಿಗೆ
ಮಲಬಾರ್ ವಿಶ್ವ ರಂಗ ಪುರಸ್ಕಾರ – 2022

0

ರಾಜೇಶ್ ಭಟ್ ಪಣಿಯಾಡಿ

ಬಾಲ್ಯದಿಂದಲೇ ಬಣ್ಣ ಬಣ್ಣದ ಕನಸುಗಳನ್ನು ಹೆಣೆಯುತ್ತ ಬಣ್ಣದ ಪರದೆಯ ಹಿಂದೆ ಬಣ್ಣದ ವೇಷಗಳ ಗಮನಿಸುತ್ತ ಬಣ್ಣದ ಅಂಗಡಿಯನ್ನೇ ವೃತ್ತಿಯನ್ನಾಗಿಸಿಕೊಂಡು ಕೊನೆಗೆ ಬಣ್ಣದ ಬದುಕಿಗೆ ತನ್ನನ್ನು ತಾನು ಒಪ್ಪಿಸಿಕೊಂಡು ಜನ ಸಾಗರದ ಮನಗೆದ್ದ ರಂಗನಟ ಶಂಕರ ಶಿವಪ್ಪ ತುಮ್ಮಣ್ಣನವರ.

ಇವರು ಹುಟ್ಟಿದ್ದು 55 ವರ್ಷಗಳ ಹಿಂದೆ ಹಾವೇರಿಯ ಬಸ್ತಿ ಓಣಿಯ ಗಂಗಾಮತ ವೆಂಬ ಬೆಸ್ತ ಕುಟುಂಬ ಒಂದರಲ್ಲಿ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸಿಲ್ಲದೆಯೇ ಪದವಿ ಪೂರ್ವದ ವರೆಗೆ ಮುಂದುವರಿದಿತ್ತು ಓದು. ಕಲಾವಿದರಿಗೆ ಕೊರತೆ ಇರದ ಹಾವೇರಿಯಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳಲ್ಲಿ, ದೊಡ್ಡಾಟಗಳಲ್ಲಿ ಕೆಲವು ಬಾರಿ ಶಂಕರರಿಗೆ ಸಣ್ಣ ಪುಟ್ಟ ಪಾತ್ರಗಳು ಆಗಾಗ ದೊರೆತಿದ್ದು ಉಂಟು.

Advertisement. Scroll to continue reading.

ಪ್ರಪ್ರಥಮ ಬಾರಿಗೆ ಗಣಪತಿ ಮತ್ತೊಮ್ಮೆ ಸರಸ್ವತಿ ಹೀಗೆ ಪಾತ್ರಕ್ಕೆ ಹಚ್ಚಿದ ಬಣ್ಣದ ಕಂಪು, ನೆಂಪು ಎಂದೂ ಮಾಸದ ನಂಟಾಗಿ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಕೂತಿತ್ತು. ಅಂದು ಪ್ರಾರಂಭವಾದ ಆ ರಂಗ ಪಯಣ ಮೂವತ್ತೈದು ಸಂವತ್ಸರಗಳನ್ನು ದಾಟಿ ಇಂದಿಗೂ ಪಕೃತಿಯ ನಡುವೆ ಸುಮ ಸೌರಭ ವನ್ನು ಸೂಸುತ್ತ ಮುಂದೆ ಸಾಗುತ್ತಿದೆ. ಇವರೊಳಗಿನ ಕಲಾವಿದನಿಗೆ ಸದಾ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹವಿತ್ತು ಸಲಹುತ್ತಿದ್ದ ಸಂಸ್ಥೆ ಹಾವೇರಿ ಸಾಹಿತಿ ಕಲಾವಿದರ ಬಳಗ.


ಎಳವೆಯಿಂದಲೂ ಏಕಪಾತ್ರಾಭಿನಯದ ಹುಚ್ಚು ಮನಸ್ಸನ್ನು ಆವರಿಸಿತ್ತು. ಈ ಹುಚ್ಚು ರಾಜ್ಯಮಟ್ಟದ ಸ್ಪದೆ೯ಗಳಲ್ಲಿ ಹಲವು ಪ್ರಥಮ ಬಹುಮಾನಗಳನ್ನು ಪಡೆಯಲು ಕಾರಣವಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಅಂಗವಾಗಿ ಹಾವೇರಿ ಹೊರವಲಯದ ಕಾರಾಗೃಹ ವಾಸಿಗಳಿಗಾಗಿ ಅಭಿನಯಿಸಿದ “ದಾರಿಯಾವುದಯ್ಯಾ… , ” ದೇವರ ಹೆಣ” ನಾಟಕ ಆಧಾರಿತ “ಸಾವಿನ ಆಟ” ಎಂಬ ಏಕ ವ್ಯಕ್ತಿ ಪ್ರಹಸನ, ನೆರೆ ಸಂತ್ರಸ್ತರ ಮನರಂಜನೆಗಾಗಿ ಮಾಡಿದ ಹಾಸ್ಯಭರಿತ ಅಭಿನಯ ಅದೆಷ್ಟೋ ಜನರ ಪ್ರಶಂಸೆಗೆ ಕಾರಣವಾಯ್ತು. ಈ ಮೂಲಕ ಜನ ಜಾಗೃತಿ ಮೂಡಿಸಲು ಮಾಡುತ್ತಿರುವ ಪ್ರಯತ್ನಕ್ಕೆ ಜೈಂಟ್ಸ್ ಗ್ರೂಪ್ ಸಂಸ್ಥೆ ಇವರನ್ನು ಪ್ರಶಸ್ತಿ ನೀಡಿ ಗೌರವಿಸಿತು. ಲಾಕ್ ಡೌನ್ ಸಂದರ್ಭದಲ್ಲಿ ಸಂವಿಪ್ರ ರಿ.ಉಡುಪಿ ಪ್ರಸ್ತುತಪಡಿಸಿದ ಆನ್ ಲೈನ್ ಹೀಗೊಂದು ರಂಗಕಲಿಕೆ ಎಂಬ ನವರಸ ಮಾಲಿಕೆಯಲ್ಲಿ ಹೆಚ್ಚು ಬಾರಿ ಭಾಗವಹಿಸಿ ಬಹಳಷ್ಟು ಜನರಿಗೆ ಚಿರಪರಿಚಿತರಾಗಿದ್ದಾರೆ.

ಇವರ 35 ವರ್ಷಗಳ ರಂಗ ಇತಿಹಾಸ ದಲ್ಲಿ ಸಾಹಿತ್ಯ , ಸಂಗೀತ, ಅಭಿನಯದ ತ್ರಿವೇಣಿ ಸಂಗಮ ರೂಪನಾಗಿ ಶಂಕರ ಶಿವಪ್ಪನವರು ನಿರಂತರವಾಗಿ ಸಾಹಿತ್ಯ ಮಂಟಪ, ಸ್ನೇಹ ಕಲಾವೃಂದ, ರಂಗತರಂಗ, ವೇದಿಕೆ …ತಂಡಗಳ ಬಹಳಷ್ಟು ನಾಟಕಗಳಿಗೆ ಜೀವ ಭಾವ ತುಂಬುತ್ತಾ ಬಂದಿದ್ದಾರೆ.


ಪುಟ್ಟಣ್ಣ ಕಣಗಾಲ್ ಪಾರಿತೋಷಕ ವಿಜೇತ ನಾಟಕ ಧರ್ಮಯುದ್ಧ, ಕುಂಟಾ ಕುಂಟಾ ಕುರುವತ್ತಿ, ಕುರಿ ತೋಳಗಳ ನಡುವೆ, ಪಗಡೆಯಾಟ, ಕಪ್ಪು ಕನ್ನಡಿಯ ಹಿಂದೆ, ಸಾಂಗ್ಯಾ ಬಾಳ್ಯ ಎಂಬ ಹಲವು ಪ್ರಸಿದ್ಧ ನಾಟಕಗಳು ಇವರ ಭಾವಪೂರ್ಣ ಅಭಿನಯಕ್ಕೆ ಕಳೆ ತಂದವು. ಸತೀಶ್ ಕುಲಕರ್ಣಿ, ಕೆ.ಆರ್. ಹೀರೆಮಠ ರಂತಹ ರಂಗ ಗುರುಗಳ ಗರಡಿಯಲ್ಲಿ ಪಳಗಿದ ತಮ್ಮಣ್ಣನ್ನವರ ಹಲವಾರು ಬೀದಿ ನಾಟಕಗಳನ್ನು ಆಯೋಜಿಸುತ್ತಾ, ರೈತಗೀತೆಗಳನ್ನು ಹಾಡುತ್ತಾ, ಜಾಥಾ, ಜನಾಂದೋಲನ ದಲ್ಲಿಯೂ ಭಾಗವಹಿಸುತ್ತ ಜನಜಾಗೃತಿ ಮೂಡಿಸುತ್ತಿದ್ದಾರೆ. ಈ ಮಧ್ಯೆ ಹಲವು ರೇಡಿಯೋ ನಾಟಕಗಳಿಗೂ ಧ್ವನಿ ನೀಡಿದ್ದಾರೆ.
ಅಭಿನಯದ ಜೊತೆ ಜೊತೆಗೆ ಹಲವು ನಾಟಕಗಳ ರಚನೆಗೂ ಮನ ಮಾಡಿ ಭೂಕಂಪ,ಆತ್ಮಹತ್ಯೆ, ಕೋರ್ಟ್ ಆರ್ಡರ್, ಕತ್ತಲೂರಿನ ಬೆತ್ತಲ ಕಥೆ ಮುಂತಾದ ನಾಟಕಗಳ ಕತೃವಾಗಿ ಅದನ್ನುರಂಗಕ್ಕೆ ಪರಿಚಯಿಸಿರುವುದು ಜೀವನಕ್ಕೊಂದು ಹೆಗ್ಗಳಿಕೆಯ ವಿಷಯ.

Advertisement. Scroll to continue reading.


ಕೇವಲ ನಾಟಕಕ್ಕೆ ಸೀಮಿತವಾಗಿರದ ಇವರ ಕಲಾ ಪ್ರೌಢಿಮೆ ಉತ್ತರ ಕರ್ನಾಟಕದ ಗಂಡು ಕಲೆ ದೊಡ್ಡಾಟದಲ್ಲೂ ಸೈ ಎನಿಸಿಕೊಂಡಿತ್ತು.
ಜನಪ್ರಿಯ ಮೂಡಲ ಮನೆ ಧಾರವಾಹಿಯ ಶಿವನ ಗೌಡ ಪಾತ್ರ, ಖ್ಯಾತ ಚಿತ್ರ ನಿರ್ದೇಶಕ ಲಿಂಗದೇವರು ರವರ ನಿರ್ದೇಶನದ ವಿರಾಟಪುರ ವಿರಾಗಿಯ ಶೆಟ್ಟರ ಪಾತ್ರ ಕನ್ನಡಿಗರ ಮನ ತಣಿಸಿತ್ತು.


ರಂಗ ಭೂಮಿಯಲ್ಲಿ ತಾನು ಈ ಮಟ್ಟಕ್ಕೆ ಏರಲು ಜನ್ಮ ನೀಡಿದ ತಾಯಿ ದಿವಂಗತ ಗಂಗಮ್ಮ, ತಂದೆ ಶಿವಪ್ಪ ರವರ ಶುಭಾಶೀರ್ವಾದ ಹಾಗೂ ಪ್ರೀತಿಯ ಮಡದಿ ಲಕ್ಷ್ಮಿಯ ನಿರಂತರ ಪ್ರೋತ್ಸಾಹ ಕಾರಣ ಎನ್ನುವುದು ಇವರ ಮನದಾಳದ ಮಾತು. ಕಲಾಮಾತೆಯೇ ನನ್ನ ಜೀವನದ ಹಸಿರು ಆಕೆಯ ಸೇವೆಯೇ ನನ್ನ ಜೀವನದ ಉಸಿರು ಎನ್ನುವ ಶಂಕರರವರ ಕೊರಳಿಗೆ ಹಲವಾರು ರಂಗ ಸಮ್ಮಾನಗಳು ಮುತ್ತಿನ ಹಾರವಾದವು. ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಷ್ಟಾನ ಬೆಂಗಳೂರು ಕೊಡಮಾಡಿದ “ಕರ್ನಾಟಕ ಕಲಾರತ್ನ” ಪ್ರಶಸ್ತಿ, ಜಿ. ಎಚ್. ರಾಘವೇಂದ್ರ ಪ್ರತಿಷ್ಟಾನ ಧಾರವಾಡದ ಜಿ.ಎಚ್. ರಂಗ ಪುರಸ್ಕಾರ, ರಂಗ ಗ್ರಾಮ ಶೇಷಗಿರಿಯ ರಂಗ ಸಮ್ಮಾನ, ಬೆಂಗಳೂರಿನ ಕಲಾ ನವರಂಗ ರಾಜ್ಯೋತ್ಸವ ಪ್ರಶಸ್ತಿ, ಹಾವೇರಿ ಜಿಲ್ಲಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಹೀಗೆ ಹತ್ತು ಹಲವು ಪ್ರಶಸ್ತಿಗಳು ಆ ಕೊರಳ ಮಾಲೆಯ ಮಣಿಗಳಾದವು.


ಜೀವನದ ಎಲ್ಲಾ ಸವಾಲುಗಳ ನಡುವೆ ಬೆಳೆಯುತ್ತಿರುವ ಕಲಾವಿದ ಶಂಕರ ಶಿವಪ್ಪ ತುಮ್ಮಣ್ಣನವರ – ಸಂಸ್ಕೃತಿ ವಿಶ್ವ ಪ್ರತಿಷ್ಟಾನ ರಿ. ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ಉಡುಪಿ ಶಾಖೆಯು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಐದು ಜನ ಶ್ರೇಷ್ಟ ರಂಗಸಾಧಕರಲ್ಲಿ ನಟ ಎಂಬ ಶೀರ್ಷಿಕೆಯಡಿಯಲ್ಲಿ ಕೊಡ ಮಾಡುತ್ತಿರುವ ಈ ಬಾರಿಯ ” ಮಲಬಾರ್ ವಿಶ್ವ ರಂಗ ಪುರಸ್ಕಾರ – 2022 ” ಕ್ಕೆ ಭಾಜನರಾಗಿರುತ್ತಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com