ವರದಿ : ದಿನೇಶ್ ರಾಯಪ್ಪನಮಠ
ಬ್ರಹ್ಮಾವರ : ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ 19ರ ಹರೆಯದ ಯುವಕ, ಚಿಕಿತ್ಸೆಯ ಬಳಿಕವೂ ಬದುಕುಳಿಯುವ ಸಾಧ್ಯತೆ ಕಾಣದ ಹಿನ್ನೆಲೆಯಲ್ಲಿ ಅವನ ಕುಟುಂಬಿಕರ ಅನುಮತಿ ಪಡೆದು ಆತನ ವಿವಿಧ ಅಂಗಗಳ ದಾನದ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ಆರು ಮಂದಿಗೆ ಜೀವದಾನ ನೀಡಿದ್ದಾರೆ.
ಬ್ರಹ್ಮಾವರ ಸಮೀಪದ ಉಪ್ಪಿನಕೋಟೆ ಬಳಿ ಎ.2ರ ಶನಿವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಸಾಲಿಗ್ರಾಮದ ರಾಜು ನಾಯರಿ ಎಂಬವರ 19ರ ಹರೆಯದ ಪುತ್ರ ಶ್ರೀನಿವಾಸ ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದರಿಂದ ಕೆಎಂಸಿ ತಜ್ಞ ವೈದ್ಯರ ತೀವ್ರ ಪ್ರಯತ್ನಗಳ ಹೊರತಾಗಿಯೂ ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಹೀಗಾಗಿ ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು.
Advertisement. Scroll to continue reading.
ಎ.5ರ ಬೆಳಗ್ಗೆ 7.50ಕ್ಕೆ ಎರಡನೇ ಬಾರಿ ಅವರನ್ನು ಪರಿಶೀಲಿಸಿದ ಬಳಿಕ ಅಧಿಕೃತ ಘೋಷಣೆ ಮಾಡಲಾಯಿತು. ಶ್ರೀನಿವಾಸ ಅವರ ತಂದೆ ರಾಜು ನಾಯರಿ ಮಗನ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರು.
1994ರ ಮಾನವ ಹಕ್ಕುಗಳ ಕಾಯಿದೆಯ 1994 ಪ್ರೋಟೋಕಾಲ್ಗಳು ಹಾಗೂ ಕಾರ್ಯವಿಧಾನಗಳಂತೆ ಶ್ರೀನಿವಾಸ ಅವರ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆದು ಒಟ್ಟು 6 ಮಂದಿಯ ಜೀವ ಉಳಿಸಲಾಯಿತು.
ಇವುಗಳಲ್ಲಿ ಎರಡು ಕಾರ್ನಿಯಾಗಳು ಮತ್ತು ಎರಡು ಮೂತ್ರಪಿಂಡ ಹಾಗೂ ಚರ್ಮವನ್ನು ಮಣಿಪಾಲ ಕೆಎಂಸಿಯಲ್ಲಿರುವ ನೊಂದಾಯಿತ ರೋಗಿಗಳಿಗೆ ಬಳಸಲಾಯಿತು. ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ವಿಶೇಷ ವ್ಯವಸ್ಥೆಯಲ್ಲಿ ವಿಮಾನದ ಮೂಲಕ ಕಳುಹಿಸಿಕೊಡಲಾಯಿತು.
Advertisement. Scroll to continue reading.