ಮಾದರಿಯಾಗಿದೆ ಕೋಡಿ ಬೆಂಗ್ರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ; ಸ್ಪೋಕನ್ ಇಂಗ್ಲಿಷ್ ಹಬ್ಬ ಆಚರಣೆ ಸಂಭ್ರಮದ ಉದ್ಘಾಟನೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕರ್ನಾಟಕ ರಾಜ್ಯ ಸರಕಾರ ಸರಕಾರಿ ಶಾಲೆಗಳನ್ನು ಕನ್ನಡ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ನೀಡುವ ಚಿಂತನೆಯಲ್ಲಿ ತೊಡಗಿದ್ದರೆ ಶೈಕ್ಷಣಿಕ ಸಾಧನೆಯ ಕರಾವಳಿಯ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಈಗಾಗಲೆ 45 ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗೆ ಸ್ಪರ್ಧೆ ನೀಡುವಂತೆ ತಯಾರಾಗಿದ್ದಾರೆ. ಹೌದು, ಇದು 1935 ವೇ ಇಸವಿಯಲ್ಲಿ ಆರಂಭಗೊಂಡ ಕಡಲು ಮತ್ತು ನದಿ ಸಂಗಮಗೊಂಡ ಕೋಡಿ ಬೆಂಗ್ರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದು ಕೆಲ ವರ್ಷದ ಹಿಂದೆ ಸಹಸ್ರಾರು ಮಂದಿ ಶಿಕ್ಷಣ ಪಡೆದ ಜ್ಞಾನ ದೇಗುಲ. ಆದರೆ, ಆಂಗ್ಲ ಭಾಷೆಯ ಮೋಹದಿಂದ 27 ವಿದ್ಯಾರ್ಥಿಗಳ ಹಂತ ತಲುಪಿದಾಗ ಶಿಕ್ಷಕರ ಮತ್ತು ಇಲಾಖೆಯ ನೆರವಿನಿಂದ ಆಂಗ್ಲ ಭಾಷಾ ಬೋಧನೆ ಆರಂಭಗೊಂಡ ಬಳಿಕ ಇದೀಗ 70 ವಿದ್ಯಾರ್ಥಿಗಳು ಇದ್ದಾರೆ. ವಿಶೇಷ ಅಂದರೆ ಹದಿನಾಲ್ಕು ಒರಿಸ್ಸಾ ರಾಜ್ಯದ ವಿದ್ಯಾರ್ಥಿಗಳು ಇದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಆಂಗ್ಲ ಭಾಷೆಯನ್ನು ಬೋಧಿಸುವ ಹಾಗೂ ಆಂಗ್ಲಭಾಷೆಯಲ್ಲಿ ಹೆಚ್ಚು ಆಸಕ್ತಿ ಇರುವ ಶಿಕ್ಷಕರನ್ನು ಆಯ್ಕೆ ಮಾಡಿ ಸತತ 70 ಆನ್ಲೈನ್ ತರಗತಿಗಳನ್ನು ಮಾಡಿ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಕ್ಷೇತ್ರ ಸಮನ್ವಯಾಧಿಕಾರಿ ಬೆಳ್ತಂಗಡಿಯಶಂಭು ಶಂಕರ್, ರಾಜ್ಯ ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿ ಅಶೋಕ್ ತೆಕ್ಕಟ್ಟೆ , ಶಬಾನಾ ಉಡುಪಿ ಹಾಗೂ ಜಗದೀಶ್ ಗೊರೋಬಲ್ ಬೆಳಗಾವಿ ಇವರಿಂದ ತರಬೇತಿ ಪಡೆದು ಬ್ರಹ್ಮಾವರ ತಾಲೂಕಿನಲ್ಲಿ ಅದನ್ನು ಕಾರ್ಯ ರೂಪಕ್ಕೆ ತಂದವರು ಬ್ರಹ್ಮಾವರ ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉದಯ ಬಿ. ಅವರು.
ಅದರ ಫಲವೇ ಇಂದು ಇಲ್ಲಿನ ವಿದ್ಯಾರ್ಥಿಗಳು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುವ ಮತ್ತು ಸಂವಹನ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಗುರುವಾರ ಇಲ್ಲಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯ್ಕ್ ಇವರಿಂದ ಸ್ಪೋಕನ್ ಇಂಗ್ಲಿಷ್ ಹಬ್ಬ ಆಚರಣೆ ಸಂಭ್ರಮದ ಉದ್ಘಾಟನೆ.
Advertisement. Scroll to continue reading.
ಕೇವಲ 3 ಖಾಯಂ ಶಿಕ್ಷಕಿಯರು, 2 ಗೌರವ ಶಿಕ್ಷಕಿಯರಿಂದ ಶಿಕ್ಷಣ ಪಡೆದ ಇಲ್ಲಿನ ವಿದ್ಯಾರ್ಥಿಗಳು ಜಯಲಕ್ಷ್ಮೀ ಟೀಚರ್ ಅವರಿಂದ ಹೆಚ್ಚು ತರಬೇತುಗೊಂಡು ಆಂಗ್ಲ ಭಾಷೆಯಲ್ಲಿ ನೀಡಿದ ಅನೇಕ ಕಾರ್ಯಕ್ರಮ ಮತ್ತು ಚಟುವಟಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರು ಈ ಸಂದರ್ಬ ಮಾತನಾಡಿ, ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂ.ವೆಚ್ಚ ಮಾಡಿ ಸಿ ಬಿ ಎಸ್ ಸಿ ಶಿಕ್ಷಣ ಪಡೆದವರು ಬುದ್ದಿವಂತರು ಎನ್ನುವ ಭ್ರಮೆಯಿಂದ ಹೊರ ಬಂದು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದವರೂ ಕೂಡಾ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ ಎನ್ನುವುದನ್ನು ಶಿಕ್ಷಣ ಇಲಾಖೆ ಮಾಡುವ ಇಂತಹ ಕಾರ್ಯಕ್ಕೆ ಪೋಷಕರು ಬೆಂಬಲ ನೀಡಬೇಕಾಗಿದೆ ಎಂದರು.
ಒಟ್ಟಾರೆಯಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಾಡಲಾದ ಪ್ರಯತ್ನ ಮತ್ತು ಪ್ರಯೋಗದಿಂದ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡಿ ಪೋಷಕರ ಮುಂದೆ ಸಾದರಪಡಿಸಿದ ಕಾರಣ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರಲ್ಲಿ ಕೂಡ ಆಸಕ್ತಿ ಹೆಚ್ಚಾಗಿರುವುದು ಕಂಡುಬಂದಿದೆ.
ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ, ಶಾಲಾ ಮುಖ್ಯಸ್ಥೆ ಕಲ್ಪನಾ , ಊರ ಗಣ್ಯರಾದ ಮನೋಹರ ಕುಂದರ್ , ಜಯಕರ ಕೋಟ್ಯಾನ್ , ದೀರೇಂದ್ರ ಪಡು ತೋನ್ಸೆ ಇನ್ನಿತರು ಉಪಸ್ಥಿತರಿದ್ದರು.