ಕರಾವಳಿ

ಮಂಗಳೂರು : ಎಬಿವಿಬಿ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನ

1

ಮಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಈ ನಾಡಿನ ವಿಶ್ವದರ್ಜೆಯ ವಕೀಲರು ತಮ್ಮ ಸರ್ವಸ್ವವನ್ನು ಮುಡಿಪಿಟ್ಟು ದುಡಿದಿದ್ದಾರೆ. ಅವರೆಲ್ಲರ ಪರಿಶ್ರಮದ ಮೂಲಕ ಸುಂದರವಾದ ಸಂವಿಧಾನ ಮತ್ತು ಅತ್ಯಂತ ಬೃಹತ್ ಪ್ರಜಾಪ್ರಭುತ್ವದ ರಾಷ್ಟ್ರನಿರ್ಮಣ ಸಾಧ್ಯವಾಯಿತು. ಪ್ರಸ್ತುತ ಕಾನೂನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಿರಿಯರ ಆದರ್ಶಗಳನ್ನು ಪಾಲಿಸುತ್ತಾ ಇಂದಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಸುಭಾಶ್ ಆಡಿ ಹೇಳಿದರು.

ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ ಎರಡು ದಿನದ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.

ಹಿಂದಿನ ಮತ್ತು ಇಂದಿನ ಕಾನೂನು ಅಧ್ಯಯನ ಶೈಲಿಯಲ್ಲಿ ಭಿನ್ನತೆ ಇದೆ‌. ಪಾರಂಪರಿಕ ಪಾಠಪ್ರವಚನವನ್ನು ಹೇಳಿಕೊಡುವುದರ ಜೊತೆಗೆ ಪ್ರಚಲಿತ ವಿದ್ಯಮಾನಗಳ ಅವಲೋಕನಕ್ಕೆ ಕಾನೂನು ವಿದ್ಯಾಲಯಗಳು ಮಹತ್ವ ಕೊಡಬೇಕು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸುವ ಹೊತ್ತಿಗೆ ಮೌಲ್ಯಯುತ ವೃತ್ತಿಪರರಾಗಿ ನಿರ್ಮಾಣಗೊಳ್ಳುವಂತಹ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Advertisement. Scroll to continue reading.

ಕಾನೂನು ವಿದ್ಯಾರ್ಥಿಗಳ ವಿಮರ್ಶಾತ್ಮಕ ಗುಣ ಸೀಮಿತವಾಗಿರಬಾರದು. ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು. ತಂತ್ರಜ್ಞಾನದ ಯುಗದಲ್ಲಿ ಮಾಹಿತಿಗೆ ಕೊರತೆಯಿಲ್ಲ. ಅವುಗಳನ್ನು ಪಡೆಯುವ ಕೌಶಲ್ಯ ವಿದ್ಯಾರ್ಥಿಗಳಲ್ಲಿರಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಅಲ್ಲಮಪ್ರಭು ಗುಡ್ಡ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಕ್ಕೆ ನಾಯಕತ್ವ ನೀಡಿದ್ದು ಕಾನೂನು ಕ್ಷೇತ್ರ. ಪ್ರಸ್ತುತವೂ ರಾಷ್ಟ್ರಕ್ಕೆ ನಾಯಕತ್ವ ವಹಿಸುವವರನ್ನು ನಿರ್ಮಿಸುವ ಜವಾಬ್ದಾರಿ ಈ ಕ್ಷೇತ್ರಕ್ಕಿದೆ. ವಿಷಯದಲ್ಲಿ ಪ್ರಾವೀಣ್ಯತೆ ಮತ್ತು ಭಾಷಾ ಪ್ರಬುದ್ಧತೆ ಹೊಂದಿರುವ ಕಾನೂನು ವಿದ್ಯಾರ್ಥಿಗಳ ಅವಶ್ಯಕತೆ ಇದೆ ಎಂದು ನುಡಿದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ವಿವೇಕಾನಂದ ಕಾನೂನು ವಿದ್ಯಾಲಯದ ನಿರ್ದೇಶಕ ಡಾ.ಬಿ.ಕೆ.ರವೀಂದ್ರ ಮಾತನಾಡಿ ಕಾನೂನು ಅಧ್ಯಯನ ಬಹುಶಿಸ್ತು ಅಭ್ಯಾಸದ ಕ್ಷೇತ್ರ. ಸಮಾಜ ಕಟ್ಟುವಲ್ಲಿ ಕಾನೂನು ಅಧ್ಯಯನದ ಪಾತ್ರ ಮಹತ್ವವಾದದ್ದು. ಸಾಮಾಜಿಕ ದೃಷ್ಟಿಯುಳ್ಳ ವಕೀಲರನ್ನು ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಕಾನೂನು ವಿದ್ಯಾಲಯಗಳಿಗಿವೆ. ಪ್ರಸ್ತುತದ ಹಲವು ಸವಾಲುಗಳನ್ನು ಎದುರಿಸಿ ಸಮಾಜಿಕ ಬದಲಾವಣೆಗೆ ನಾಂದಿ ಹಾಡುವ ಕಾರ್ಯ ಕಾನೂನು ಅಧ್ಯಯನದಿಂದ ಆಗಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ‘ಸಂವಿಧಾನ ಶಿಲ್ಪಿ, ಜ್ಞಾನಯೋಗಿ ಡಾ.ಬಿ.ಆರ್. ಅಂಬೇಡ್ಕರ್’ ಎಂಬ ಮರುಮುದ್ರಣಗೊಂಡ ಪುಸ್ತಕ ಬಿಡುಗಡೆ ಮತ್ತು ಅಬಿವಿಪಿ ಮೂರನೇ ಆವೃತ್ತಿಯ ವಿದ್ಯಾರ್ಥಿ ಸಂಸ್ಕೃತಿ ಚಳುವಳಿಯ ಪೋಸ್ಟರ್ ಅನಾವರಣಗೊಂಡಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯ ಸಮಿತಿಯ ಸದಸ್ಯೆ ಪ್ರೇಮಾಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮೀಕ್ಷಾ ಪ್ರಾರ್ಥಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ರಾಜ್ಯಾಧ್ಯಾಕ್ಷ ಡಾ.ರೋಹಿಣಾಕ್ಷ ಶಿರ್ಲಾಲು ಪ್ರಸ್ಥಾವಿಸಿ, ಕಾರ್ಯದರ್ಶಿ ಮಣಿಕಂಠ ಕಳಸ ಸ್ವಾಗತಿಸಿದರು. ವಿದ್ಯಾರ್ಥಿ ಪ್ರವೀಣ್ ಶಿವಮೊಗ್ಗ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com