ವರದಿ : ಶ್ರೀದತ್ತ ಹೆಬ್ರಿ
ಉಡುಪಿ: ಮನೆ ಹಾಗೂ ಅಂಗಡಿಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಉಡುಪಿಯ ಮಾರಾಳಿ ಗ್ರಾಮದ ಉಮಾನಾಥ ಶೆಟ್ಟಿ, ಬೆಂಗಳೂರಿನ ಮಾರತ್ ಹಳ್ಳಿಯ ಶ್ರೀಧರ್ ಆಲಿಯಾಸ್ ಪ್ರಕಾಶ್, ಹಾಸನದ ಸುನೀಲ್ ಕುಮಾರ್ ಹಾಗೂ ಮಂಗಳೂರು ಕಂದಾವರ ಗ್ರಾಮದ ಸಂತೋಷ್ ಅಲಿಯಾಸ್ ಅಲ್ವಿನ್ ಪಿಂಟೋ ಆರೋಪಿಗಳು.
Advertisement. Scroll to continue reading.
ಆರೋಪಿಗಳು 2008 ಡಿಸೆಂಬರ್ 8 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಉಡುಪಿ ತಾಲೂಕು ನಾಲ್ಕೂರು ಗ್ರಾಮದ ಮುದ್ದೂರಿನ ಬಾಲಕೃಷ್ಣ ವೈದ್ಯ ಎಂಬವರ ಮನೆ ಮತ್ತು ಅಂಗಡಿಗೆ ಪ್ರವೇಶಿಸಿ, ರಿವಾಲ್ವರ್ ತೋರಿಸಿ, ಬೆದರಿಕೆ ಹಾಕಿ, ಮನೆಯಲ್ಲಿದ್ದ ಮೂವರನ್ನು ಕಟ್ಟಿಹಾಕಿ, 15000 ರೂ. ನಗದು, 71 ಪವನ್ ಚಿನ್ನ ಮತ್ತು 5 ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದರು.
ಈ ಬಗ್ಗೆ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಆರೋಪಿಗಳಾದ ಉಮಾನಾಥ ಶೆಟ್ಟಿ, ಸುನೀಲ್ ಕುಮಾರ್ ಹಾಗೂ ಸಂತೋಷ್ ಅಲಿಯಾಸ್ ಅಲ್ವಿನ್ ಪಿಂಟೋ ರವರಿಗೆ 3 ವರ್ಷ 6 ತಿಂಗಳು ಕಾರಾಗೃಹ ವಾಸ ಶಿಕ್ಷೆ ಹಾಗೂ 10500 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಬದರಿನಾಥ ನ್ಯಾರಿ ಮತ್ತು ಜಯಂತಿ ಕೆ. ವಾದ ಮಂಡಿಸಿರುತ್ತಾರೆ.
Advertisement. Scroll to continue reading.