ಬ್ರಹ್ಮಾವರ : ಭಾರತದ ಪ್ರಾಚೀನ ಪರಂಪರೆಯ ಓರ್ಥೋ ಡೋಕ್ಸ್ ಸಿರಿಯನ್ ಇಗರ್ಜಿಯಾದ ಸಾಸ್ತಾನ ಸೈಂಟ್ ಥೋಮಸ್ ಇಗರ್ಜಿ ಇದೀಗ ನವೀಕೃತಗೊಂಡು ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭ ಮೇ 17 ಮತ್ತು 18 ರಂದು ಜರುಗಲಿದೆ.
ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರದಿಂದ ಉಡುಪಿಗೆ ಬರುವಾಗ ಸಾಸ್ತಾನ ಟೋಲ್ ಎಡ ಭಾಗದಲ್ಲಿ 80 ಅಡಿ ಎತ್ತರ 76 ಅಡಿ ಅಗಲದಲ್ಲಿ ಅಪೂರ್ವ ವಾಸ್ತುವಿನ್ಯಾಸದೊಂದಿಗೆ ಸುಂದರವಾಗಿ ರಚನೆಗೊಂಡಿದೆ. ಏಕ ಕಾಲದಲ್ಲಿ ನೂರಾರು ಮಂದಿ ಪ್ರಾರ್ಥನೆ ಮಾಡುವಷ್ಟು ವಿಶಾಲ ಜಾಗ , ಸುಂದರ ಕುಸುರಿ ಕೆತ್ತನೆಯ ಏಸು ಮತ್ತು ಮರಿಯಮ್ಮನ ಮೂರ್ತಿ , ಭವ್ಯವಾದ ಪ್ರಾರ್ಥನಾ ವೇದಿಕೆ , ಎತ್ತರದಲ್ಲಿರುವ ಗಂಟಾ ಗೋಪುರ ಕಂಡು ಬರುತ್ತದೆ.
Advertisement. Scroll to continue reading.
ಇಲ್ಲಿನ 8 ವಾರ್ಡ್‍ನ 240 ಕ್ರೈಸ್ತ ಕುಟುಂಬ ಅಲ್ಲದೆ ಪರಿಸರದ ಎಲ್ಲಾ ಧರ್ಮಿಯರೂ ಇದರ ರಚನೆಗೆ ಎಲ್ಲಾ ರೀತಿಯ ನೆರವನ್ನು ಮತ್ತು ಸಹಕಾರವನ್ನು ನೀಡಿರುವುದು ವಿಶೇಷವಾಗಿದೆ.
ಫಾದರ್ ನೋವೇಲ್ ಲೂಯಿಸ್ ,ಜೀಣೋದ್ಧಾರದ ಅಧ್ಯಕ್ಷ ಮೋಸೆಸ್ ರೋಡ್ರಿಗಸ್ , ಕಾರ್ಯದರ್ಶಿ ರೋಬರ್ಟ್ ರೋಡ್ರಿಗಸ್ , ಖಜಾಂಚಿ ಜೇರಾಲ್ಡ್ ರೋಡ್ರಿಗಸ್ ಮತ್ತು ಟ್ರಸ್ಟಿ ಲಾರೆನ್ಸ್ ಅಲ್ಮೇಡಾ , ಮಿಲ್ಟನ್ ಅಲ್ಮೇಡಾ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕರ್ತರು ಹಗಲಿರುಳು ಎನ್ನದೆ ಶ್ರಮವಹಿಸಿ ಉದ್ಘಾಟನೆಗೆ ಸಿದ್ಧಗೊಂಡಿದೆ. ಮೇ 15 ಭಾನುವಾರ ಸಂಜೆ 3-30 ಕ್ಕೆ ಮಾಬುಕಳದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭದ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.
ಮಲಂಕರ ಓರ್ಥೋ ಡೋಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷರಾಗಿರುವ ಪೂರ್ವದ ಕೆಥೊಲಿಕೋಸ್ ಹಾಗೂ ಮಲಂಕರ ಮೆಟ್ರೋಪಾಲಿಟಿನ್ , ಪರಮ ಪೂಜ್ಯ ಬಸಲಿಯೋಸ್ ಮಾರ್ಥೋಮ ಮ್ಯಾಥ್ಯೂಸ್ ತೃತೀಯ , ಮತ್ತು ಬ್ರಹ್ಮಾವರ ಧಮಘ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಹಾಗೂ ಇತರ ಧರ್ಮಾಧ್ಯಕ್ಷರ ಉಪಸ್ಥಿತಿಯಲ್ಲಿ ನಾನಾ ಧಾರ್ಮಿಕ ವಿಧಿಯೊಂದಿಗೆ ಜರುಗಲಿದೆ.