ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಯೋಜನೆ : ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ; ವೃತ್ತಿ ಮಾರ್ಗದರ್ಶನ ಕಾರ್ಯಗಾರ

1

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಯೋಜನೆ-ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ಸಹಯೋಗದಲ್ಲಿ ಕೊರಗ ಸಮುದಾಯದ ಯುವಕ,ಯುವತಿಯರಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಗಾರವು ಮಂಗಳೂರು ನಗರದ ಕೋಡಿಕಲ್ ನ ಕುದ್ಮುಲ್ ರಂಗರಾವ್ ಸಮುದಾಯ ಭವನದಲ್ಲಿ ನಡೆಯಿತು.

ಈ ಕಾರ್ಯಗಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಪ್ರಕೃತಿ ಪ್ರಿಯರು ಮತ್ತು ಬಹಳ ಶಿಸ್ತು ಹಾಗೂ ಮುಗ್ಧತೆಯಿಂದ ಜೀವನ ನಡೆಸುತ್ತಿರುವ ಕರಾವಳಿಯ ಮೂಲನಿವಾಸಿಗಳಾದ ಕೊರಗ ಬುಡಕಟ್ಟು ಜನರ ಅಭಿವೃದ್ಧಿಯು ನಿಧಾನವಾಗಿ ಸಾಗುತ್ತಿದೆ. ಸಮುದಾಯದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆರ್ಥಿಕ ಮತ್ತು ಸಾಮಾಜಿಕ ಆಡೆತಡೆಗಳನ್ನು ಮೀರಿ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಮಹತ್ತರವಾದ ಸಾಧನೆಗಳನ್ನು ಸಾಧಿಸಬೇಕಾಗಿದೆ. ಸಮಾಜದಲ್ಲಿ ಗಣನೀಯ ಪ್ರಮಾಣದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶಿಕ್ಷಣದ ಸಾಧನೆ ಮತ್ತು ವೃತ್ತಿಕೌಶಲ್ಯಗಳನ್ನು ತಮ್ಮದಾಗಿಸಿಕೊಳ್ಳಲು ಸಮುದಾಯ ಹೆಚ್ಚು ಶ್ರಮವಹಿಸಬೇಕು. ಕೊರಗರ ಸರ್ವತೋಮುಖ ಅಭಿವೃದ್ಧಿಗೆ ಡಾ. ಮಹಮ್ಮದ್ ಫೀರ್ ವರದಿಯು ಕೊರಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನೀಡಿರುವ ಅಮೂಲ್ಯವಾದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬೇಕು. ಸರಕಾರದ ಸೌಲಭ್ಯಗಳನ್ನು ಸಮುದಾಯವು ಫಲಪ್ರದವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಗೂ ಸಾಂವಿಧಾನಿಕ ಹಕ್ಕುಗಳಿಗಾಗಿ ಸಂಘಟನೆಗಳು ಹೋರಾಟ ಮಾಡುವುದರಲ್ಲಿ ತಪಿಲ್ಲ. ಮುಖ್ಯವಾಗಿ ಯುವಜನತೆ ತಮ್ಮ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕೊರಗ ಸಮುದಾಯವು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು ವಿದ್ಯಾರ್ಥಿ ಜೀವನದಲ್ಲಿ ಮತ್ತು ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ನಿರಂತರ ಓದುವಿಕೆ, ಸಮಯ ನಿರ್ವಹಣೆ, ಪರಿಶ್ರಮ, ಏಕಾಗ್ರತೆ, ನೈತಿಕ ಮೌಲ್ಯ, ಸಕಾರಾತ್ಮಕ ಚಿಂತನೆ ಮತ್ತು ಜೀವನ ಕೌಶ್ಯಲತೆಗಳನ್ನು ವೃದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ಕೊರಗ ಸಮುದಾಯದ ಅಭ್ಯುಯದಕ್ಕೋಸ್ಕರ ಇನ್ನಷ್ಟೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಈ ವೇಳೆ, ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಂಗಳೂರು ಕಾಲೇಜ್ ಆಫ್ ಫಿಶರೀಸ್‍ನ ನಿವೃತ್ತ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ. ಎಸ್. ಎಮ್. ಶಿವಪ್ರಕಾಶ್ ಅವರು ಮಾತನಾಡಿ, ಯುವ ಪೀಳಿಗೆಯು ಜೀವನದಲ್ಲಿ ಗುರಿ ಮತ್ತು ಉದ್ದೇಶಗಳನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಜ್ಞಾನಭಿವೃದ್ಧಿ ಮತ್ತು ಸಂವಹನ ಕಲೆಗಳನ್ನು ಉನ್ನತ ಗುಣಮಟ್ಟದತ್ತ ಹೆಚ್ಚಿಸಿಕೊಳ್ಳಬೇಕು. ಇದರಿಂದ ನಿರ್ದಿಷ್ಟ ಕಾಲಘಟ್ಟದಲ್ಲಿ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸನ್ನು ಸಾಧಿಸಬಹುದು ಎಂದು ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಈ ಕಾರ್ಯಗಾರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು 60ಕ್ಕೂ ಅಧಿಕ ಮಂದಿ ಕೊರಗ ಸಮುದಾಯದ ಯುವಕ, ಯುವತಿಯರು ಪಾಲ್ಗೊಂಡಿದ್ದರು.

Advertisement. Scroll to continue reading.

ಈ ಸಂದರ್ಭದಲ್ಲಿ ಕೋಡಿಕಲ್‍ನ ನಿವಾಸಿ ಸಮಾಜ ಸೇವಕಿ ಮೀನಾ, ಕೊರಗ ಸಮದಾಯದ ಮುಖಂಡರಾದ ಮೋಹನ್ ಅಡ್ವೆ, ಪುತ್ರನ್ , ಮತ್ತಾಡಿ ಕಾಯರ್‍ಪಳಿಕೆ, ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಯೋಜನೆ-ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದ ಸಂಯೋಜಕರಾದ, ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಪ್ರಶಾಂತ ನಾಯ್ಕ ಮತ್ತು ನೋಡಲ್ ಅಧಿಕಾರಿ ಹಾಗೂ ಸಮಾಜಶಾಸ್ತ್ರವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಬಿತಾ, ಸುರೇಂದ್ರ ಕಳ್ತೂರು ಉಪಸ್ಥಿತರಿದ್ದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com