ಬರ್ಲಿನ್: ಎದುರಾಳಿ ಜೊತೆ ಬಾಕ್ಸಿಂಗ್ ಆಡುತ್ತಿದ್ದಾಗಲೇ ರಿಂಗ್ ನಲ್ಲಿಯೇ ಹೃದಯಾಘಾತಕ್ಕೊಳಗಾಗಿ ಯುವ ಬಾಕ್ಸರ್ ಮೂಸಾ ಯಮಕ್ ಸಾವನ್ನಪ್ಪಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು.
ವೃತ್ತಿಪರ ಬಾಕ್ಸಿಂಗ್ ನಲ್ಲಿ ಸೋಲಿಲ್ಲದ ಸರದಾರನಾಗಿದ್ದ ಯಂಗ್ ಬಾಕ್ಸರ್ ಇಲ್ಲಿಯವರೆಗೆ ತಾವು ಆಡಿರುವ 75 ಪಂದ್ಯಗಳಲ್ಲಿ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಜರ್ಮನಿಯಲ್ಲಿ ವಾಸವಾಗಿದ್ದ ಬಾಕ್ಸರ್ ಮೂಸಾ ಯಮಕ್, ಕೇವಲ 12ನೇ ವಯಸ್ಸಿನಲ್ಲಿದ್ದಾಗಲೇ ಬಾಕ್ಸಿಂಗ್ ವೃತ್ತಿ ಬದುಕು ಆರಂಭಿಸಿದ್ದರು. WBF ಮತ್ತು GBU ಸ್ಪರ್ಧೆಗಳಲ್ಲಿ ಭಾಗಿಯಾಗಿ, ವಿಜಯಶಾಲಿಯಾಗಿದ್ದ ಇವರು ಹೆವಿವೇಯ್ಟ್ ಬಾಕ್ಸಿಂಗ್‌ನಲ್ಲಿ ಯುರೋಪಿಯನ್-ಏಷ್ಯನ್ ಚಾಂಪಿಯನ್ ಸಹ ಆಗಿದ್ದರು.
Advertisement. Scroll to continue reading.
ಜರ್ಮನಿಯ ಮ್ಯೂನಿಚನ್ ನಲ್ಲಿ ಬುಧವಾರ ನಡೆದ 84+ ಕೆಜಿ ಬಾಕ್ಸಿಂಗ್ ಪಂದ್ಯದ ಮೂರನೇ ಸುತ್ತಿನಲ್ಲಿ ಅವರು ಎದುರಾಳಿ ಉಗಾಂಡದ ಹಂಜಾ ವಂಡೆರಾ ವಿರುದ್ಧ ಮೂಸಾ ಯಮಕ್ ಸೆಣಸುತ್ತಿದ್ದರು. ಈ ಸಂದರ್ಭ ದಿಢೀರ್ ಹೃದಯಾಘಾತಕ್ಕೊಳಗಾಗಿ, ಕುಸಿದು ಬಿದ್ದಿದ್ದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಸಾವನ್ನಪ್ಪಿದ್ದಾರೆಂದು ವೈದ್ಯರ ತಂಡ ಘೋಷಿಸಿದೆ.