ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶಾಲಾ ಶಿಕ್ಷಣ ಇಲಾಖೆ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಿದೆ.
ಬ್ರಿಟಿಷರ ಕಾಲದಲ್ಲಿ ಅಂದಿನ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ನಾಮಕರಣ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಸಾರ್ವನಿಕ ಶಿಕ್ಷಣ ಇಲಾಖೆ ಎಂದೇ ಕರೆಯಲಾಗುತ್ತಿದ್ದು, ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಎಂದು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ವೆಬ್ ಸೈಟ್ ಸ್ಕೂಲ್ ಎಜುಕೇಶನ್ (www. Schooleduction.kar.in) ಎಂಬ ಹೆಸರಿನಲ್ಲಿಯೇ ಇರುವ ಕಾರಣ ಶಾಲಾ ಶಿಕ್ಷಣ ಎಂಬ ಹೆಸರು ಬಳಕೆಗೆ ಬಂದ ಸಂದರ್ಭದಲ್ಲಿ ವೆಬ್ ಸೈಟ್ ಹೆಸರು ಬದಲಾಯಿಸುವ ಪ್ರಮೇಯ ಬರುವುದಿಲ್ಲ ಎನ್ನಲಾಗಿದೆ.
Advertisement. Scroll to continue reading.
ಪೂರ್ವ ಪ್ರಾಥಮಿಕದಿಂದ ಎಸ್‌ಎಸ್ ಎಲ್ ಸಿ ಯ ವರೆಗೆ ಶಿಕ್ಷಣ ವ್ಯವಸ್ಥೆಯು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದ್ದು, ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯೇ ಬದಲಾಗುತ್ತಿದ್ದು, ಅದರ ಪೂರ್ವಭಾವಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರು ಸಹ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.