ಬ್ರಹ್ಮಾವರ : ಬಾಳಕುದ್ರು, ಹಂಗಾರಕಟ್ಟೆಯ ಎಂ.ಜಿ.ರೋಡ್ ನಿಂದ ಚಿಪ್ಪಿಕಟ್ಟೆಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದೆ. ಇಲ್ಲಿ ವಾಹನ ಸಂಚಾರ ಬಿಡಿ, ನಡೆದಾಡುವುದು ಕಷ್ಟಕರವಾಗಿದೆ.
ಇದೀಗ ಮಳೆಯ ಪರಿಣಾಮ ಈ ರಸ್ತೆಯು ಮತ್ತಷ್ಟು ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ರಸ್ತೆಯ ಗುಂಡಿಗೆ ಕೆಂಪು ಮಣ್ಣು ಸುರಿದಿರುವ ಕಾರಣ ತೀರಾ ಹದಗೆಟ್ಟಿರುವ ರಸ್ತೆಯಲ್ಲಿ ಕಾಲಿಡಲು ಸಹ್ಯವೆನಿಸುತ್ತಿಲ್ಲ.
ಈ ಭಾಗದಲ್ಲಿ 100 ಕ್ಕೂ ಅಧಿಕ ಮನೆಗಳಿವೆ. ಅಂಗನವಾಡಿಗೆ ಹೋಗುವ ಮಕ್ಕಳು, ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಮಂದಿಗೆ ಈ ರಸ್ತೆ ಬಳಸುತ್ತಾರೆ. ಆದರೆ, ಈಗ ಮಾತ್ರ ಕೈ ಕಾಲು ಕೆಸರು ಮಾಡಿಕೊಂಡು ಸಾಗಬೇಕು. ಅಲ್ಲದೇ, ಬೈಕ್ ಸವರಾರು ಇಲ್ಲಿ ಸ್ಕಿಡ್ ಆಗಿ ಬಿದ್ದು, ಶಪಿಸಿದ್ದೂ ಇದೆ.
ಶಾಲಾ ಮಕ್ಕಳು ಮಾತ್ರವಲ್ಲದೇ ಇಡೀ ಗ್ರಾಮಸ್ಥರು ಪರದಾಡುವಂತಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.