ಬೆಂಗಳೂರು : ಈ ಬಾರಿ ಲಾಲ್ ಬಾಗ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ `ಫ್ಲವರ್ ಶೋ’ ನಡೆಯಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಲ್ ಬಾಗ್ ನ ಸಸ್ಯಶಾಸ್ತ್ರೀಯ ಉದ್ಯಾನದಲ್ಲಿ ಅತ್ಯಂತ ಜನಪ್ರಿಯತೆಗಳಿಸಿದ್ದ ಪುಷ್ಪ ಪ್ರದರ್ಶನ ನಡೆಯಲಿದೆ. ಈ ಫ್ಲವರ್ ಶೋಗೆ ದಿ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದರು.
ಈ ವರ್ಷ ಆಗಸ್ಟ್ 5 ರಿಂದ ಆಗಸ್ಟ್ 15 ರವರೆಗೆ ಫ್ಲವರ್ ಶೋ ಆಯೋಜಿಸಲಾಗುವುದು. ಆಗಸ್ಟ್ ಹದಿನೈದರ ಬಳಿಕ ಒಂದೆರಡು ದಿನಗಳ ಕಾಲ ಫ್ಲವರ್ ಶೋ ಮುಂದುವರಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಬಾರಿ ವಿದೇಶಗಳಿಂದಲೂ ಹೂವುಗಳನ್ನು ತರಿಸಲಾಗಿದೆ. ಆಗಸ್ಟ್ 5 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಫ್ಲವರ್ ಶೋ ಉದ್ಘಾಟಿಸಲಿದ್ದಾರೆ. ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಫ್ಲವರ್ ಶೋ ಆಯೋಜಿಸಲಾಗುತ್ತದೆ. ಈ ಬಾರಿಯ ಫ್ಲವರ್ ಶೋ ನಲ್ಲಿ ಡಾ. ರಾಜಕುಮಾರ್ ಅವರ ಗಾಜನೂರಿನ ಮನೆಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement. Scroll to continue reading.
ಇನ್ನು ಇದೆ ವೇಳೆ ರಾಜ್ಯದಲ್ಲಿ ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸಂಪೂರ್ಣ ವರದಿ ತರಿಸುತ್ತಿದ್ದಾರೆ. ವರದಿ ಬಳಿಕ ರೈತರಿಗೆ ಮಾಡಬೇಕಿರುವ ಸಹಾಯವನ್ನು ಖಂಡಿತವಾಗಿಯೂ ಮಾಡುತ್ತೇವೆ. ಏನೇನು ನಷ್ಟ ಉಂಟಾಗಿದೆಯೋ ಅದನ್ನು ಗಮನಿಸುತ್ತೇವೆ. ಪ್ರಾಮಾಣಿಕವಾಗಿ ನಾವು ರೈತರ ಜೊತೆ ಇದ್ದೇವೆ ಎಂದು ಹೇಳಿದರು.