ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ ಅವರು ಗುರುವಾರ ನಿಧನರಾಗಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಇವಾನಾ ಟ್ರಂಪ್ ನಿಧನದ ಬಗ್ಗೆ ಸ್ವತಃ ಡೊನಾಲ್ಡ್ ಟ್ರಂಪ್ ಅವರೇ ಮಾಹಿತಿ ನೀಡಿದ್ದಾರೆ.
ಮ್ಯಾನ್‌ಹಟನ್ ಟೌನ್‌ಹೌಸ್‌ನಲ್ಲಿ ನಿನ್ನೆ ಮಧ್ಯಾಹ್ನ ಅವರು ಹೃದಯಾಘಾತದಿನದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್ ನಿನ್ನ ನೆನಪನ್ನು ನನ್ನ ಹೃದಯದಲ್ಲಿ ಜೀವಂತವಾಗಿರಿಸಿಕೊಳ್ಳುತ್ತೇನೆ. ಸ್ಪೂರ್ತಿದಾಯಕ ಜೀವನವನ್ನು ಸಾಗಿಸಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎನ್ನುವ ಮೂಲಕ ವಿದಾಯ ಹೇಳಿದ್ದಾರೆ.
Advertisement. Scroll to continue reading.
1946ರಲ್ಲಿ ಜೆಕೊಸ್ಲೊವಾಕಿಯಾದಲ್ಲಿ ಇವಾನ ಜನಿಸಿದ್ದರು. ತಂದೆ ಮಿಲೋಸ್ ಝೆಲ್ನೆಕ್ ಎಲೆಕ್ಟ್ರಿಕಲ್ ಇಂಜಿನಿಯರ್, ತಾಯಿ ಮೇರಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. 1970ರಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದು, ಬಳಿಕ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. 1977ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಇವಾನ ವಿವಾಹವಾಗಿದ್ದರು. ಬಳಿಕ 1992ರಲ್ಲಿ ವಿಚ್ಛೇದನ ಪಡೆದರು. ಇವರಿಗೆ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಎಂಬ ಮೂವರು ಮಕ್ಕಳಿದ್ದಾರೆ.