ಉಡುಪಿ : ಜಿಲ್ಲೆಯಲ್ಲಿ ಕೋವಿಡ್-19 ಮೊದಲನೇ ಮತ್ತು ಎರಡನೇ ಡೋಸ್ ಲಸಿಕೆ ನೀಡುವಲ್ಲಿ ಈಗಾಗಲೇ ಶೇ.100 ಗುರಿ ಸಾಧಿಸಿದ್ದು, ಕೋವಿಡ್-19 ಸಂಭಾವ್ಯ ನಾಲ್ಕನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುಂಜಾಗ್ರತಾ ಡೋಸ್ ಲಸಿಕೆ ನೀಡುವುದು ಬಹಳ ಮುಖ್ಯವಾಗಿದ್ದು, ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಪ್ರಯುಕ್ತ, 18 ವರ್ಷದಿಂದ 59 ವರ್ಷದ ವರೆಗಿನ ಸಾರ್ವಜನಿಕರಿಗೆ ಸೆಪ್ಟಂಬರ್ 30 ರವರೆಗೆ ಉಚಿತ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮಕ್ಕೆ ಜುಲೈ 18 ರಿಂದ ಚಾಲನೆ ನೀಡಲಾಗುವುದು.
ಜಿಲ್ಲೆಯಲ್ಲಿ 2021 ರ ಜನವರಿ 16 ರಂದು ಕೋವಿಡ್-19 ಲಸಿಕಾಕರಣ ಆರಂಭಗೊಂಡಿದ್ದು, ಪ್ರಾರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಭಾರತ ಸರಕಾರದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮತ್ತು ರಾಜ್ಯ ಸರಕಾರದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತೆಯರಿಗೆ ಕೋವಿಡ್-19 ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು.
ಈಗಾಗಲೇ 18 ವರ್ಷ ಮೇಲ್ಪಟ್ಟ 10,04,712 ಫಲಾನುಭವಿಗಳು ಮೊದಲನೇ ಡೋಸ್ ಲಸಿಕೆ ಪಡೆದು 100.57% ಹಾಗೂ 10,00,092 ಮಂದಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದು, ಶೇಕಡಾ 100.11% ಸಾಧನೆ ಆಗಿದ್ದು, ಮುನೆಚ್ಚರಿಕಾ ಡೋಸ್ ಪಡೆಯಲು ಜಿಲ್ಲೆಯಲ್ಲಿ 18 ರಿಂದ 59 ವರ್ಷದ 8,00,000 ಫಲಾನುಭವಿಗಳು ಇರುತ್ತಾರೆ.
Advertisement. Scroll to continue reading.
ಜಿಲ್ಲೆಯಲ್ಲಿ ಜುಲೈ 18 ರಿಂದ 18 ವರ್ಷ ಮೇಲ್ಪಟ್ಟ, 2ನೇ ಡೋಸ್ ಲಸಿಕೆ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರು ಕೂಡಲೇ ಹತ್ತಿರದ ಸರಕಾರಿ ಆರೋಗ್ಯ ಕೇಂದ್ರಗಳ ಲಸಿಕಾ ಕೇಂದ್ರಕ್ಕೆ ಹೋಗಿ ಉಚಿತವಾಗಿ ಲಸಿಕೆ ಪಡೆದು ಸ್ವಾತಂತ್ರ‍್ಯದ ಅಮೃತ ಮಹೋತ್ಸದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕೋರಿದೆ.
ವಿದೇಶಕ್ಕೆ ತೆರಳುವ 18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಎರಡನೇ ಡೋಸ್ ಪಡೆದು 3 ತಿಂಗಳು ದಾಟಿದಲ್ಲಿ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯಬಹುದಾಗಿದೆ.
ಸೆಪ್ಟಂಬರ್ 30 ರ ಒಳಗೆ 18 ವರ್ಷದಿಂದ 59 ವರ್ಷದ ವರೆಗಿನ ಎಲ್ಲರಿಗೂ ಕೋವಿಡ್-19 ಮುನ್ನೆಚ್ಚರಿಕಾ ಲಸಿಕೆ ನೀಡಲು ಪ್ರಾರಂಭದ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದು, ಮುಂದಿನ ದಿನದಲ್ಲಿ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕಾರ್ಯ ನಿರ್ವಹಿಸುವ ವಿವಿಧ ಖಾಸಗಿ ಸಂಸ್ಥೆಗಳಲ್ಲೂ ಸಹ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳ ಮೂಲಕ ಮುನ್ನೆಚರಿಕಾ ಡೋಸ್ ನೀಡುವ ಮೂಲಕ, ನಿಗದಿತ ಅವಧಿಯೊಳಗೆ ಮುನ್ನೆಚ್ಚರಿಕಾ ಲಸಿಕೆ ನೀಡುವಲ್ಲಿ ಸಂಪೂರ್ಣ ಗುರಿ ಸಾಧಿಸಲು ಆರೋಗ್ಯ ಇಲಾಖೆ ವತಿಯಿಂದ ಯೋಜನೆ ರೂಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೋವಿಡ್-19 ಸಂಭಾವ್ಯ 4 ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಾರ್ವಜನಿಕರು ಮುನ್ನೆಚ್ಚರಿಕಾ ಲಸಿಕೆ ಪಡೆಯುವುದು ಅತ್ಯಂತ ಅಗತ್ಯವಿದ್ದು, ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಪ್ರಯುಕ್ತ, ಜಿಲ್ಲೆಯಾದ್ಯಂತ 18 ವರ್ಷದಿಂದ 59 ವರ್ಷದ ವರೆಗಿನ ಎಲ್ಲಾ ಸಾರ್ವಜನಿಕರಿಗೆ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೆಪ್ಟಂಬರ್ 30 ರ ವರೆಗೆ ಉಚಿತ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯದಲ್ಲಿ ನಿಗದಿತ ಗುರಿಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement. Scroll to continue reading.