ಬಾರಕೂರು : ದೇವಾಲಯಗಳ ನಗರ ಬಾರಕೂರಿನ ನಾನಾ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಶುಕ್ರವಾರ ಜರುಗಿತು.
ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ , ಬಾರಕೂರು ಬ್ರಹ್ಮಲಿಂಗ ವೀರಭದ್ರ ದುರ್ಗಾ ಪರಮೇಶ್ವರೀ ದೇವಸ್ಥಾನ, ಬಾರಕೂರು ಕಚ್ಚೂರು ನಾಗೇಶ್ವರ ದೇವಸ್ಥಾನ, ಬಾರಕೂರು ಮೂಡುಕೇರಿ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಶಿವಗಿರಿ ಬಾರಕೂರು, ಶ್ರೀ ಏಕನಾಥೇಶ್ವರೀ ದೇವಸ್ಥಾನ ಬಾರಕೂರು, ಕಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಬಾರಕೂರು ದೇವಾಲಯಗಳಲ್ಲಿ ವಿಜೃಂಭಣೆಯಿಂದ ಪೂಜೆ ನಡೆಯಿತು.
ಪ್ರತೀ ದೇವಸ್ಥಾನದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮ ಅರ್ಚನೆ ಪ್ರಾರ್ಥನೆ ಭಜನೆ ಸ್ತೋತ್ರ ಜರುಗಿತು . ಹಲವಾರು ಜಾತಿ ಜನಾಂಗದವರ ಮೂಲ ಕ್ಷೇತ್ರವೆನಿಸಿದ ಬಾರಕೂರಿನಲ್ಲಿ ಇಂದು ಮಹಿಳಾ ಮಣಿಗಳೇ ಹೆಚ್ಚು ಕಂಡು ಬಂದರು.
ಕೆಲವೊಂದು ದೇವಸ್ಥಾನದಲ್ಲಿ ಮಹಿಳೆಯರು ಪರಸ್ಪರ ಹೂ ಕುಂಕುಮ ಚೂಡಿಯನ್ನು ವಿನಿಮಯ ಮಾಡಿಕೊಂಡರು. ಇನ್ನು ಕೆಲವು ಭಾಗದಲ್ಲಿ ಬಳೆಗಾರ ಮಹಿಳೆಯರಿಂದ ಬಳೆಗಳನ್ನು ತೊಡಿಸಿಕೊಂಡುದು ಕಂಡು ಬಂತು.