ಪಡು ತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಳದ ಪಂಚಕಜ್ಜಾಯ ಪ್ರಸಾದದ ಬಗ್ಗೆ ಅಂತಾರಾಷ್ಟ್ರೀಯ ಶೆಫ್ ವಿಕಾಸ್ ಖನ್ನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸ್ವತಃ ಪಂಚಕಜ್ಜಾಯ ತಯಾರಿಸಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ ಗಮನ ಸೆಳೆದಿದ್ದಾರೆ.
ಮೂಲತಃ ಪಂಜಾಬ್ನವರಾದ ವಿಕಾಸ್ ಖನ್ನಾ 90ರ ದಶಕದಲ್ಲಿ ಮಣಿಪಾಲಕ್ಕೆ ಬಂದು ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ಪಡೆದು, ಬಳಿಕ ಸ್ವಂತ ಪ್ರತಿಭೆಯಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುತ್ತಿದ್ದ ಸಂದರ್ಭ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅವರಿಗೆ ಅರ್ಚಕರು ಪಂಚಕಜ್ಜಾಯ ಪ್ರಸಾದ ನೀಡಿದ್ದರು.
Advertisement. Scroll to continue reading.
ಆ ಸಿಹಿ ಕಜ್ಜಾಯದ ರುಚಿಗೆ ಮಾರುಹೋದ ವಿಕಾಸ್ ಖನ್ನಾ, ಈ ಪಂಚಕಜ್ಜಾಯ ಮಾಡುವುದು ಹೇಗೆ ಎಂದು ದೇವಳದ ಸಿಬ್ಬಂದಿಯಲ್ಲಿ ಮಾಹಿತಿ ಪಡೆದಿದ್ದಾರೆ. ಇದೀಗ ಅಮೆರಿಕದಲ್ಲಿದ್ದುಕೊಂಡು, ತನ್ನ ಹಳೆ ನೆನಪನ್ನು ಮೆಲುಕು ಹಾಕಿಕೊಂಡಿದ್ದು, ಜತೆಗೆ ಆ ಸಿಹಿ ಕಜ್ಜಾಯ ತಯಾರಿಸಿ ಯೂಟ್ಯೂಬ್ನಲ್ಲಿ ಒಂದು ನಿಮಿಷ, 24 ಸೆಕೆಂಡ್ಗಳ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ವಿಕಾಸ್ ಖನ್ನಾ ಅವರ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ದೇವಳದ ಪಂಚಕಜ್ಜಾಯ ಪ್ರಸಾದ ಅಮೃತ
ಕಾರ್ಕಳ ಶ್ರೀ ವೆಂಕಟರಮಣ ದೇವಳದ ಪಂಚಕಜ್ಜಾಯ ಪ್ರಸಾದ ಅಮೃತ ಎನ್ನುವ ವಿಕಾಸ್ ಖನ್ನಾ ಅದನ್ನು ಸ್ವೀಟ್ ಪೋವಾ ಎಂದು ಕರೆದಿದ್ದಾರೆ. ತಾನು ಮಾಡಿದ ವಿಡಿಯೋದಲ್ಲಿ ಈ ಸಿಹಿ ಕಜ್ಜಾಯವನ್ನು ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ. ಅವಲಕ್ಕಿ, ತುಪ್ಪ, ಗೇರುಬೀಜ, ಏಲಕ್ಕಿ, ಬೆಲ್ಲ, ಒಣ ದ್ರಾಕ್ಷಿ, ತೆಂಗಿನ ತುರಿಗಳನ್ನು ಹದವಾಗಿ ರೋಸ್ಟ್ ಮಾಡಿ, ಬಳಿಕ ಎಲ್ಲವನ್ನೂ ಬೆರೆಸಿ, ಕೊನೆಯಲ್ಲಿ ಅದನ್ನು ಬಾಳೆ ಎಲೆಯಲ್ಲಿ ಮಡಚಿ ಇಡುವವರೆಗೆ ಸರಳವಾಗಿ ವಿವರಿಸಿದ್ದಾರೆ.
ದೇವಳದ ಪ್ರಸಾದವನ್ನು ಹೊಗಳಿದ ಚೆಫ್:
Advertisement. Scroll to continue reading.
ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ಮಾಡುತ್ತಿದ್ದಾಗ ಇಡೀ ಕರ್ನಾಟಕವನ್ನು ಸುತ್ತುತ್ತಿದ್ದೆ. ಬೇರೆ ಬೇರೆ ಪ್ರದೇಶಗಳ ಖಾದ್ಯ ವೈವಿಧ್ಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೆ.ಪಡು ತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿದ್ದ ಸಂದರ್ಭ ಅಲ್ಲಿ ಪ್ರಸಾದವಾಗಿ ನೀಡಿದ ಸಿಹಿ ಕಜ್ಜಾಯದ ರುಚಿಗೆ ಮಾರುಹೋದೆ.
ಇದೇ ಕಜ್ಜಾಯವನ್ನು ನಾನು ಮನೆಯಲ್ಲಿ ಎಷ್ಟೇ ಚೆನ್ನಾಗಿ ಮಾಡಿದರೂ, ಅದು ದೇವಳದಲ್ಲಿ ನೀಡುವ ಪ್ರಸಾದಕ್ಕೆ ಸಾಟಿಯಾಗಲಿಲ್ಲ. ಆ ದೇವಳದ ಪಂಚಕಜ್ಜಾಯ ಪ್ರಸಾದದ ರುಚಿಯನ್ನು ಹೊಗಳಲು ಶಬ್ದಗಳೇ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
Advertisement. Scroll to continue reading.