ಹೊಸದಿಲ್ಲಿ: ಅರುಣ್ ಜೆಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಪರೂಪದ ಘಟನೆ ನಡೆದಿದೆ. ಅದೇನೆಂದರೆ, ಶ್ರೀಲಂಕಾ ತಂಡದ ಹಿರಿಯ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್ ಔಟ್ ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೈಮ್ಡ್ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಮ್ಯಾಥ್ಯೂಸ್ ಒಳಗಾಗಿದ್ದಾರೆ.
25ನೇ ಓವರ್ನಲ್ಲಿ ಶಕಿಬ್ ಅಲ್ ಹಸನ್ ಬೌಲಿಂಗ್ನಲ್ಲಿ ಸದೀರ ಸಮರವಿಕ್ರಮ ಕ್ಯಾಚಿತ್ತು ಔಟ್ ಆದರು. ಈ ವೇಳೆ ಕ್ರೀಸ್ಗೆ ಬಂದ ಏಂಜೆಲೊ ಮ್ಯಾಥ್ಯೂಸ್ ಮೊದಲನೇ ಎಸೆತ ಎದುರಿಸಲು ಸಜ್ಜಾಗುತ್ತಿದ್ದರು. ಆದರೆ, ಈ ವೇಳೆ ಅವರ ಹೆಲ್ಮೆಟ್ನಲ್ಲಿ ಸಮಸ್ಯೆ ಇರುವುದನ್ನು ಅರಿತು ಬೇರೆ ಹೆಲ್ಮೆಟ್ ಕೊಡುವಂತೆ ಡಗೌಟ್ನಲ್ಲಿ ಕುಳಿತಿದ್ದ ಸಹ ಆಟಗಾರರಿಗೆ ಸಿಗ್ನಲ್ ಮಾಡಿದರು.
ಮ್ಯಾಥ್ಯೂಸ್ ಅವರ ಹೆಲ್ಮೆಟ್ನಲ್ಲಿ ಸ್ಟ್ರಾಪ್ ಇರಲಿಲ್ಲ ಎಂಬುದು ವಿಡಿಯೋದಲ್ಲಿ ಕಾಣಿಸುತ್ತಿತ್ತು. ಹಾಗಾಗಿ ಹೆಲ್ಮೆಟ್ ಬದಲಿಸಲು ಅವರು ಬಯಸಿದ್ದರು.
Advertisement. Scroll to continue reading.
ಮ್ಯಾಥ್ಯೂಸ್ ಅವರ ಹೆಲ್ಮೆಟ್ ಬದಲಿಸುವುದಕ್ಕೂ ಮುನ್ನ ಬಾಂಗ್ಲಾದೇಶ ನಾಯಕ ಶಕಿಬ್ ಅಲ್ ಹಸನ್ ಅವರು ಈ ಸನ್ನಿವೇಶವನ್ನು ಫೀಲ್ಡ್ ಅಂಪೈರ್ಗಳಾದ ಮರೈಸ್ ಎರಾಸ್ಮಸ್ ಹಾಗೂ ರಿಚರ್ಡ್ ಇಲ್ಲಿಂಗ್ವರ್ಥ್ ದೂರು ನೀಡಿದರು. ಐಸಿಸಿ ನಿಯಮದ ಪ್ರಕಾರ ಫೀಲ್ಡ್ ಅಂಪೈರ್ಗಳು ಏಂಜೆಲೊ ಮ್ಯಾಥ್ಯೂಸ್ ಅವರಿಗೆ ಟೈಮ್ಡ್ ಔಟ್ ಘೋಷಿಸಿದರು. ಶಕಿಬ್ ಜೊತೆ ಮ್ಯಾಥ್ಯೂಸ್ ವಾದಕ್ಕೆ ಇಳಿದರು. ಆದರೆ, ಕೊನೆಗೆ ಮ್ಯಾಥ್ಯೂಸ್ ಅಸಹಾಯಕರಾಗಿ ಒಂದೂ ಎಸೆತ ಕಾಣದೆ ಪೆವಿಲಿಯನ್ಗೆ ಮರಳಿದರು.
ಏನಿದು ಟೈಮ್ಡ್ ಔಟ್?
ಎಂಸಿಸಿ ರೂಲ್ಸ್ ಪ್ರಕಾರ, ವಿಕೆಟ್ ಹೋದಾಗ ಅಥವಾ ಬ್ಯಾಟ್ಸ್ಮನ್ ರಿಟೈರ್ ಆದಾಗ ಮುಂದಿನ ಬ್ಯಾಟ್ಸ್ಮನ್ ಸಿದ್ಧವಾಗಿ ಮೂರು ನಿಮಿಷದ ಒಳಗೆ ಚೆಂಡು ಎದುರಿಸಬೇಕು. ಇಲ್ಲವಾದಲ್ಲಿ ಟೈಮ್ಡ್ ಔಟ್ ಎಂದು ಘೋಷಿಸಲಾಗುತ್ತದೆ. ಈ ಮೂಲಕ ಬ್ಯಾಟ್ಸ್ಮನ್ ಔಟಾಗುತ್ತಾನೆ. ಆದರೆ ಇದಕ್ಕಾಗಿ ಫೀಲ್ಡ್ ಮಾಡುತ್ತಿರುವ ತಂಡ ಅಂಪೈರ್ ಗೆ ಮನವಿ ಮಾಡಬೇಕಾಗುತ್ತದೆ.
2023ರ ವಿಶ್ವಕಪ್ ರೂಲ್ಸ್ ಪ್ರಕಾರ, 120 ಸೆಕೆಂಡ್ (2ನಿಮಿಷ)ನಲ್ಲಿ ಬ್ಯಾಟ್ಸ್ಮನ್ ಸಿದ್ಧವಾಗಬೇಕು. ಲೇಟ್ ಆದರೆ ಟೈಮ್ಡ್ ಔಟ್ ಎಂದು ಘೋಷಿಸಲಾಗುತ್ತದೆ.
Advertisement. Scroll to continue reading.