ಪುತ್ತೂರು : ದುಷ್ಕರ್ಮಿಗಳ ತಂಡವೊಂದು ಟೈಗರ್ಸ್ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್ ಕಲ್ಲೇಗ(24) ಅವರನ್ನು ತಲವಾರಿನಿಂದ ಕೊಚ್ಚಿ ಕೊಲೆಗೈದ ಘಟನೆ ಸೋಮವಾರ(ನ.6) ತಡರಾತ್ರಿ ನೆಹರೂ ನಗರದಲ್ಲಿ ನಡೆದಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರ ವಿಚಾರವಾಗಿ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಹೇಳಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೃತ್ಯವು ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.
ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ತುಸು ದೂರದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್ ಮೇಲೆ ತಂಡ ದಾಳಿ ನಡೆಸಿದ್ದು, ಅಲ್ಲಿಂದ ಆತನನ್ನು ಅಟ್ಟಾಡಿಸಿಕೊಂಡು ಬಂದು ತಲವಾರಿನಿಂದ ದಾಳಿ ನಡೆಸಿದ್ದಾರೆ. ಎಟಿಎಂ ಬಳಿಯಿಂದ ಮಾಣಿ ಮೈಸೂರು ಹೆದ್ದಾರಿಯನ್ನು ದಾಟಿ ಆಚೆ ಬದಿ ಗಿಡಗಂಟಿಗಳಿಂದ ಆವೃತ್ತವಾದ ಜಾಗದವರೆಗೂ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ.
ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಇನ್ನು, ಅಕ್ಷಯ್ ವಿವೇಕಾನಂದ ಕಾಲೇಜ್ ಬಳಿ ನಿವಾಸಿಯಾಗಿದ್ದು, ತಂದೆ ಚಂದ್ರಶೇಖರ, ತಾಯಿ ಕುಸುಮ, ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಕಳೆದ 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಎಂಬ ಹುಲಿ ವೇಷ ತಂಡವನ್ನು ಅವರು ಮುನ್ನಡೆಸುತ್ತಿದ್ದರು. ಕಳೆದ ವರ್ಷದ ಬಿಗ್‌ಬಾಸ್ ಶೋನಲ್ಲಿ ರೂಪೇಶ್ ಶೆಟ್ಟಿ ಮನವಿ ಮೇರೆಗೆ ಕಲ್ಲೇಗ ಟೈಗರ್ಸ್ ತಂಡವನ್ನು ಕರೆಸಿಕೊಂಡು ಪಿಲಿಯೇಸ ನೃತ್ಯವನ್ನು ಮಾಡಲಾಗಿತ್ತು.
Advertisement. Scroll to continue reading.