ರಾಜ್ಯ

ಪತ್ನಿ ರಾಧಿಕಾ, ಪುತ್ರಿ ಶಮಿಕಾ ಮಾಹಿತಿ ಮುಚ್ಚಿಟ್ಟ ಆರೋಪ: ಎಚ್‌ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್ ನೀಡಿದ ಕೋರ್ಟ್

0

ಬೆಂಗಳೂರು: ಪತ್ನಿ ರಾಧಿಕಾ, ಪುತ್ರಿ ಶಮಿಕಾ ಮಾಹಿತಿ ಮುಚ್ಚಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹಾಗೂ ಜೆಡಿಎಲ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ದೂರನ್ನು ಬೆಂಗಳೂರು ಕೋರ್ಟ್ ವಜಾಗೊಳಿಸಿದೆ.

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ತಮ್ಮ ಉಮೇದುವಾರಿಕೆಯ ಜೊತೆ ತಪ್ಪು ಅಫಿಡವಿಟ್‌ ಸಲ್ಲಿಸಿದ್ದು, ಎರಡನೇ ಪತ್ನಿ ರಾಧಿಕಾ ಹಾಗೂ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ಪುತ್ರಿ ಶಮಿಕಾ ಅವರ ಮಾಹಿತಿ ಬಚ್ಚಿಡುವ ಮೂಲಕ ಪ್ರಮಾದ ಎಸಗಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶಿಸುವಂತೆ ಕೋರಿದ್ದ ಖಾಸಗಿ ದೂರನ್ನು ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ವಜಾ ಮಾಡಿದೆ. ಬೆಂಗಳೂರಿನ ಎಸ್‌ ಆನಂದ ಅವರು ದೂರು ನೀಡಿದ್ದರು.

ಈ ದೂರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಜೆ ಪ್ರೀತ್‌ ಅವರು ವಜಾ ಮಾಡಿದ್ದಾರೆ.

Advertisement. Scroll to continue reading.

“ಯಾವುದೇ ದಾಖಲೆ ಸಲ್ಲಿಸದೇ ರಾಧಿಕಾ ಅವರು ಕುಮಾರಸ್ವಾಮಿ ಅವರ ಎರಡನೇ ಪತ್ನಿ ಎಂದು ದೂರುದಾರರು ಹೇಳುವುದನ್ನು ಆಧರಿಸಿ ಈ ಹಂತದಲ್ಲಿ ನ್ಯಾಯಾಲಯವು ಕುಮಾರಸ್ವಾಮಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಲಾಗದು. ಮೊದಲ ಪತ್ನಿ ಜೀವಂತವಾಗಿರಬೇಕಾದರೆ ಹಾಲಿ ಕಾನೂನಿನಲ್ಲಿ ಎರಡನೇ ಪತ್ನಿ ಪರಿಕಲ್ಪನೆಗೆ ಅವಕಾಶವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಕುಮಾರಸ್ವಾಮಿ ಅವರು ರಾಧಿಕಾ, ನಿಖಿಲ್‌ ಮತ್ತು ಶಮಿಕಾ ಅವರ ಬಗ್ಗೆ ಮಾಹಿತಿ ಬಚ್ಚಿಟ್ಟಿದ್ದಾರೆ ಎಂಬುದು ದೂರುದಾರರ ವಾದವಾಗಿದೆ. ಆದರೆ, ದೂರುದಾರರು ಅನಿತಾ ಅವರು ಕುಮಾರಸ್ವಾಮಿ ಅವರ ಪತ್ನಿ ಎಂಬುದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಕುಮಾರಸ್ವಾಮಿ ಅವರು ಉಮೇದುವಾರಿಕೆ ಅಂದರೆ ಫಾರ್ಮ್‌ 26ರಲ್ಲಿ ಪತ್ನಿ ಕಾಲಂನಲ್ಲಿ ಅನಿತಾ ಅವರನ್ನು ಪತ್ನಿ ಎಂದು ಹೇಳಿದ್ದಾರೆ. ಆದರೆ, ರಾಧಿಕಾ ಅವರು ಕುಮಾರಸ್ವಾಮಿ ಅವರ ಪತ್ನಿ ಅಥವಾ ಎರಡನೇ ಪತ್ನಿ ಎಂದು ತೋರಿಸಲು ಯಾವುದೇ ದಾಖಲೆ ಸಲ್ಲಿಸಲಾಗಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

“ಕುಮಾರಸ್ವಾಮಿ ಅವರು ತಮ್ಮ ಅಫಿಡವಿಟ್‌ನಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ. ದೂರಿನ ಪ್ರಕಾರ ನೋಡಿದರೆ ಕುಮಾರಸ್ವಾಮಿ ಅವರು ಪತ್ನಿ ರಾಧಿಕಾ ಮತ್ತು ಮಕ್ಕಳ ಮಾಹಿತಿ ನೀಡಿಲ್ಲ. ತಪ್ಪು ಹೇಳಿ ಅಥವಾ ಮಾಹಿತಿ ಬಹಿರಂಗಪಡಿಸದಿರುವುದು ಬೇರೆಬೇರೆ ವಿಚಾರಗಳಾಗಿವೆ. ಹೀಗಾಗಿ, ಕುಮಾರಸ್ವಾಮಿ ಅವರು ಐಪಿಸಿ ಸೆಕ್ಷನ್‌ 181ರ ಅಡಿ ಯಾವುದೇ ಅಪರಾಧ ಎಸಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

 “ಫಾರ್ಮ್‌ 26ರಲ್ಲಿ ಅಭ್ಯರ್ಥಿಯ ಮಕ್ಕಳ ಕುರಿತಾದ ಮಾಹಿತಿಗೆ ಸಂಬಂಧಿಸಿದ ಅಂಶ ಇಲ್ಲ. ಪತ್ನಿ, ಆಕೆಯ ಆಸ್ತಿ ಮತ್ತು ಇತರ ಅಂಶಗಳನ್ನು ಹೊರತುಪಡಿಸಿ ಮಕ್ಕಳ ಮಾಹಿತಿ ಕೋರಲಾಗಿಲ್ಲ. ಫಾರ್ಮ್‌ 26ರಲ್ಲಿ ಏನು ಮಾಹಿತಿ ಕೋರಲಾಗಿದೆಯೋ ಆ ಮಾಹಿತಿಯನ್ನಷ್ಟೇ ಅಭ್ಯರ್ಥಿ ನೀಡಬೇಕು. ಕುಮಾರಸ್ವಾಮಿ ಅವರು 2018ರ ಏಪ್ರಿಲ್‌ 19ರಂದು ಫಾರ್ಮ್‌ 26 ಅನ್ನು ಸಲ್ಲಿಸಿದ್ದು, ಇದನ್ನೇ ದೂರುದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಇದರ ಪ್ರಕಾರ ಆರೋಪಿ ಕುಮಾರಸ್ವಾಮಿ ಅವರು ಮಗ/ಮಗಳು/ಮಕ್ಕಳ ಬಗ್ಗೆ ಮಾಹಿತಿ ನೀಡಬೇಕಿಲ್ಲ. ಹೀಗಾಗಿ, ಇದು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125ಎ ಅಡಿ ಅಪರಾಧವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com