ನೆಲಮಂಗಲ : ಮನೆಯ ಸಮೀಪದಲ್ಲಿ ಮೇಯಲು ಬಂದ ದನಗಳಿಗೆ ಮಹಿಳೆಯೊಬ್ಬರು ಆಸಿಡ್ ಎರಚಿ ಗಾಯ ಮಾಡಿರುವ ಅಮಾನವೀಯ ಘಟನೆ ಬೆಂಗಳೂರಿನ ಉತ್ತರ ಭಾಗದ ಗುಣಿ ಅಗ್ರಹಾರ ಎಂಬಲ್ಲಿ ನಡೆದಿದೆ.
ಗುಣಿ ಅಗ್ರಹಾರ ನಿವಾಸಿ ಜೋಸೆಫ್ ಗ್ರೇಸ್ ಎನ್ನುವ ವೃದ್ಧೆ ಕೃತ್ಯ ಎಸಗಿದಾಕೆ. ಈಕೆಯ ಮನೆಯ ಬಳಿ ಖಾಲಿ ಜಾಗವಿದ್ದು, ಈ ಭಾಗಕ್ಕೆ ದಿನ ನಿತ್ಯ ಹತ್ತಾರು ಹಸುಗಳು ಮೇಯಲು ಬರುತ್ತಿದ್ದವು.
ಬೀದಿ ಬದಿ ಎಸೆದ ಹಣ್ಣು ತರಕಾರಿಗಳನ್ನು ತಿನ್ನುತ್ತಾ, ಈ ಖಾಲಿ ಜಾಗದಲ್ಲಿದ್ದ ಹುಲ್ಲುಗಳನ್ನು ತಿಂದು ದಿನ ಈ ಭಾಗದಲ್ಲಿ ಮೇಯಲು ಹೋಗುತ್ತಿದ್ದವು. ಖಾಲಿ ಜಾಗದಲ್ಲಿ ಮೇಯಲು ಬರುತ್ತಿದ್ದ ಹಸುಗಳನ್ನು ಕಂಡ ಮಹಿಳೆ ಕೋಪದಿಂದ ಅವುಗಳ ಮೇಲೆ ಆಸಿಡ್ ಎರಚಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
Advertisement. Scroll to continue reading.
ಜೋಸೆಫ್ ಗ್ರೇಸ್ ಕಳೆದ ಮೂರು ದಿನಗಳಿಂದ ಮನೆ ಬಳಿ ಬಂದ ಹಸುಗಳ ಮೇಲೆ ಮನಬಂದಂತೆ ಆಸಿಡ್ ಎರಚಿದ್ದು, ಸುಮಾರು ಹದಿನೈದಕ್ಕೂ ಹೆಚ್ಚು ಹಸುಗಳು ಗಂಭೀರ ಗಾಯಗೊಂಡಿವೆ. ಬಾತ್ ರೂಂ ಸ್ವಚ್ಛತೆಗೆ ಬಳಸಲಾಗುತ್ತಿದ್ದ ಆಸಿಡ್‌ಅನ್ನು ಹಸುಗಳ ಮೇಲೆ ಎರಚಲಾಗಿದೆ ಎನ್ನಲಾಗಿದೆ.
ಘಟನೆಯಲ್ಲಿ ರಾಜಣ್ಣ ಅವರಿಗೆ ಸೇರಿದ 2 ಹಸುಗಳು, ನಾಗಣ್ಣ ಎನ್ನುವವರಿಗೆ ಸೇರಿದ 4 ಹಸುಗಳು, ಪ್ರಕಾಶ್ ಎನ್ನುವವರಿಗೆ ಸೇರಿದ 3 ಹಸುಗಳು, ಗಂಗಮ್ಮ ಎನ್ನುವವರಿಗೆ ಸೇರಿದ 2 ಹಸುಗಳು, ಕೃಷ್ಣ ಎನ್ನುವವರಿಗೆ ಸೇರಿದ 3 ಹಸುಗಳು, ಶ್ರೀರಾಮ ಎನ್ನುವವರಿಗೆ ಸೇರಿದ 3 ಹಸುಗಳು ಹಾಗೂ ಮದನ್ ಎನ್ನುವವರಿಗೆ ಸೇರಿದ ಒಂದು ಹಸು ಗಂಭೀರ ಗಾಯಗೊಂಡಿವೆ.
ಸುಟ್ಟ ಗಾಯಗಳಿಂದ ಹಸುಗಳ ದೇಹದ ಭಾಗಗಳು ಸುಟ್ಟಿದ್ದು, ನೋವಿನಲ್ಲಿ ನರಳಾಡುತ್ತಿದೆ. ಮೂರು ದಿನಗಳಿಂದ ನೋವಿನಿಂದ ಹಾಲು ಕೊಡುತ್ತಿಲ್ಲ. ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ಹಾಲು ಮಾರಾಟವನ್ನೇ ನಂಬಿಕೊಂಡ ನಮ್ಮ ಜೀವನದ ಗತಿಯೇನು..? ನಮಗೆ ನ್ಯಾಯ ಕೊಡಿಸಿ. ನಮ್ಮ ಹಸುಗಳ ಈ ಸ್ಥಿತಿಗೆ ಕಾರಣವಾದ ಮಹಿಳೆ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಹಸುಗಳ ಮಾಲೀಕರು ಒಟ್ಟಾಗಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement. Scroll to continue reading.