ಉಡುಪಿ : ಅಷ್ಟ ಮಠಗಳ ಪರ್ಯಾಯ ಮಹೋತ್ಸವಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈ ಬಾರಿಯ ಪರ್ಯಾಯ ಪೀಠವನ್ನು ಪುತ್ತಿಗೆ ಶ್ರೀಗಳು ನಿರ್ವಹಿಸಲಿದ್ದಾರೆ. ಅವರು ಸಮುದ್ರೋಲ್ಲಂಘನೆ ಮಾಡಿ ವಿದೇಶಕ್ಕೆ ಪ್ರಯಾಣಿಸಿ ಸಂಪ್ರದಾಯ ಉಲ್ಲಂಘಿಸಿದ ಕಾರಣ ಅವರಿಗೆ ಪರ್ಯಾಯ ನೀಡದಂತೆ ಕೋರಿ ಗುರುರಾಜ ಜೀವನರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ, ರಾಷ್ಟ್ರಕವಿ ಕುವೆಂಪು ಅವರ ಕವಿತೆ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಕವಿತೆ ಉಲ್ಲೇಖಿಸಿ, ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿತು. ಅಷ್ಟೇ ಅಲ್ಲ, ಮನೆ ಕಟ್ಟಿ ಕೂರುವುದಕ್ಕಿಂತ ಹೊರಗೆ ಓಡಾಡುವುದು ಲೇಸು. ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
Advertisement. Scroll to continue reading.
2008ರಲ್ಲಿ ಸಹ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಅಷ್ಟ ಮಠಗಳ ಪೈಕಿ ಆರು ಮಠಗಳ ಮಠಾಧೀಶರು ಪರ್ಯಾಯದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಶೀರೂರು ಶ್ರೀಗಳು ಮಾತ್ರ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಬೆಂಬಲ ಸೂಚಿಸಿದ್ದರು.
ಈ ಬಾರಿಯೂ ಮತ್ತೆ ಪರ್ಯಾಯ ಮಹೋತ್ಸವಕ್ಕೆ ಅಪಸ್ವರ ಕೇಳಿಬರುತ್ತಿದ್ದು, ಉಳಿದ ಮಠಾಧೀಶರು ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. ಜ.17 ಮತ್ತು 18ರಂದು ಪರ್ಯಾಯ ಮಹೋತ್ಸವ ನೆರವೇರಲಿದ್ದು, ಈ ವೇಳೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಬಹುತೇಕ ಗೈರಾಗಲಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಜ.22ರಂದು ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ನಡೆಯಲಿರುವುದರಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಅವರಾಗಿರುವುದರಿಂದ ಜ.17ರಂದೇ ಅವರು ಅಯೋಧ್ಯೆಗೆ ತೆರಳಲಿದ್ದಾರೆ.
Advertisement. Scroll to continue reading.