ಬೆಂಗಳೂರು: ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸಾಬೂನನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಹೈದರಾಬಾದಿನಲ್ಲಿ ಪತ್ತೆಯಾಗಿದೆ.
ಕಾರ್ಯಾಚರಣೆ ವೇಳೆ ನಕಲಿ ಉತ್ಪನ್ನ, ಅದರ ಪ್ಯಾಕಿಂಗ್ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್ಗಳು ಸೇರಿದಂತೆ ಸುಮಾರು 2 ಕೋಟಿ ರೂ. ಮೌಲ್ಯದ ಮಾಲು ಪತ್ತೆಯಾಗಿದೆ.
ಈ ಸಂಬಂಧ ಹೈದರಾಬಾದಿನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬವರನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾಲಕಪೇಟೆ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ.
Advertisement. Scroll to continue reading.
ಹೇಗಿತ್ತು ಕಾರ್ಯಾಚರಣೆ :
ನಕಲಿ ಮೈಸೂರ್ ಸ್ಯಾಂಡಲ್ ಸಾಬೂನು ಹೈದರಾಬಾದ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬಗ್ಗೆ ಕೆಎಸ್ಡಿಎಲ್ ಅಧ್ಯಕ್ಷರೂ ಆದ ಸಚಿವ ಎಂಬಿ ಪಾಟೀಲ್ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು. ಈ ಬಗ್ಗೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್ ಅವರಿಗೆ ನಿಗಾ ವಹಿಸಲು ಸೂಚಿಸಿದ್ದರು. ಅದರಂತೆ, ಸಿಕಂದರಾಬಾದಿನಲ್ಲಿರುವ ಸಂಸ್ಥೆಯ ಅಧಿಕೃತ ಮಾರಾಟ ಕಚೇರಿಯ ಸಿಬ್ಬಂದಿ ತಮಗೆ ಸಿಕ್ಕ ಸುಳಿವಿನ ಜಾಡು ಹಿಡಿದು ಕಾರ್ಯಪ್ರವೃತ್ತರಾಗಿದ್ದರು.
ಈ ವೇಳೆ ಹೈದರಾಬಾದಿನ ಕೆಲವು ಪ್ರದೇಶಗಳಲ್ಲಿ ನಕಲಿ ಸಾಬೂನು ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಪೂರೈಕೆದಾರರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.
ಬಳಿಕ ಕೆಎಸ್’ಡಿಎಲ್ ಸಿಬ್ಬಂದಿ ಸ್ವತಃ ಒಂದು ಲಕ್ಷ ರೂಪಾಯಿ ಬೆಲೆಯ ಉತ್ಪನ್ನ ಖರೀದಿಸಿ, ಮೂಲ ಪತ್ತೆಗೆ ಮುಂದಾಗಿದ್ದರು.
Advertisement. Scroll to continue reading.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣ ಕೊಟ್ಟು 25 ಲಕ್ಷ ರೂಪಾಯಿ ಬೆಲೆಯ ಸೋಪು ಖರೀದಿಗೆ ಆರ್ಡರ್ ಕೊಟ್ಟಿದ್ದರು. ಅದನ್ನು ಸ್ವತಃ ತಾವೇ ವಾಹನದಲ್ಲಿ ಸಾಗಿಸುವ ನೆಪದಲ್ಲಿ ಉತ್ಪಾದನೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಹೀಗೆ ಕಾರ್ಯಾಚರಣೆ ನಡೆಸಿದಾಗ ನಕಲಿ ಉತ್ಪಾದನಾ ಘಟಕ ಪತ್ತೆಯಾಗಿದೆ ಎಂದು ಕೆಎಸ್’ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಅವರು ಮಾಹಿತಿ ನೀಡಿದ್ದಾರೆ.
ಉತ್ಪಾದನಾ ಘಟಕದಲ್ಲಿ ತಲಾ 150 ಗ್ರಾಂ ತೂಕದ 3 ಸಾಬೂನುಗಳಿರುವ 20 ಬಾಕ್ಸ್ ಗಳು (ಪ್ರತಿಯೊಂದು ಬಾಕ್ಸ್ ನಲ್ಲಿ 90ರಂತೆ ಒಟ್ಟು 1800 ಪೀಸ್ ಗಳು), ತಲಾ 75 ಗ್ರಾಂ ನ 47 ಬಾಕ್ಸ್ ಗಳು (9400 ಪೀಸ್ ಗಳು), 150 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಖಾಲಿ ಬಾಕ್ಸ್ ಗಳು ಮತ್ತು 75 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಬಾಕ್ಸ್ ಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
Advertisement. Scroll to continue reading.