ನವದೆಹಲಿ : ಉತ್ತರ ಪ್ರದೇಶದ ಮಥುರಾದಲ್ಲಿನ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯಲ್ಲಿ ಕೋರ್ಟ್ ನಿಗಾವಣೆಯಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಿರುವ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ, ಹಿಂದೂ ಸಂಘಟನೆಗಳ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರಿಗೆ, ನೀವು ನ್ಯಾಯಾಲಯದ ಕಮಿಷನರ್ ನೇಮಕಕ್ಕೆ ಅಸ್ಪಷ್ಟ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇದು ಉದ್ದೇಶದ ಮೇಲೆ ಬಹಳ ನಿರ್ದಿಷ್ಟವಾಗಿರಬೇಕು. ಅದರ ಪರಿಶೀಲನೆಗೆ ಎಲ್ಲವನ್ನೂ ನ್ಯಾಯಾಲಯಕ್ಕೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಮಿಷನರ್ ನೇತೃತ್ವದಲ್ಲಿ ಶಾಹಿ ಈದ್ಗಾ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ.
Advertisement. Scroll to continue reading.
ಶ್ರೀ ಕೃಷ್ಣನ ಜನ್ಮಸ್ಥಳದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿರುವ ಹಿಂದೂ ಸಂಘಟನೆಗಳು ಪ್ರತಿಪಾದಿಸಿದ್ದು, ಅಲ್ಲಿ ಸಮೀಕ್ಷೆ ನಡೆಸಿದರೆ ದೇವಸ್ಥಾನ ಇದ್ದ ಕುರುಹು ಸಿಗಲಿವೆ ಎಂದು ಒತ್ತಾಯಿಸಿವೆ. ಈ ಬೇಡಿಕೆಯನ್ನು ಕಳೆದ ವರ್ಷದ ಡಿಸೆಂಬರ್ನಲ್ಲಿ ಸ್ಥಳೀಯ ನ್ಯಾಯಾಲಯ ಎತ್ತಿಹಿಡಿದಿತ್ತು. ಇದನ್ನು ಮುಸ್ಲಿಂ ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಕೂಡ ಹಿಂದೂ ಸಂಘಟನೆಗಳ ವಾದಕ್ಕೆ ಮನ್ನಣೆ ನೀಡಿ, ಸಮೀಕ್ಷೆಗೆ ಸೂಚನೆ ನೀಡಿತ್ತು.
ಶಾಹಿ ಈದ್ಗಾ ಮಸೀದಿ ಆವರಣದಲ್ಲಿ ಯಾವುದೇ ಸಮೀಕ್ಷೆ ನಡೆಸುವಂತೆ ಇಲ್ಲ ಎಂದು ಈಗ ಸುಪ್ರೀಂಕೋರ್ಟ್ ಹೇಳಿದೆ. “ಪ್ರಕರಣದ ಪ್ರಕ್ರಿಯೆಯು ಹೈಕೋರ್ಟ್ನಲ್ಲಿ ಮುಂದುವರಿಯಲಿದೆ. ಆದರೆ ಕೋರ್ಟ್ ಕಮಿಷನರ್ ನೇಮಕವನ್ನು ತಡೆಹಿಡಿಯಲಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Advertisement. Scroll to continue reading.