ಬೀದರ್ : ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಭು ಚೌಹಾಣ್ ಬಿ.ವೈ.ವಿಜಯೇಂದ್ರ ಅವರ ಕಾಲಿಗೆ ಬಿದ್ದ ಪ್ರಸಂಗ ನಡೆಯಿತು.
ಬಿಜೆಪಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮತ್ತೆ ಟಿಕೆಟ್ ನೀಡದಂತೆ ಮಾಜಿ ಸಚಿವ ಪ್ರಭು ಚೌಹಾಣ್ ಮನವಿ ಮಾಡುತ್ತಲೇ ಬಂದಿದ್ದಾರೆ. ಇಂದು ಪಕ್ಷದ ಕಾರ್ಯಕ್ರಮದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಲಿಗೆ ಬಿದ್ದಿದ್ದಾರೆ.
ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು. ಆ ಮೂಲಕ ಪರೋಕ್ಷವಾಗಿ ಖೂಬಾಗೆ ಟಿಕೆಟ್ ನೀಡುದಂತೆ ಸಂದೇಶ ರವಾನಿಸಿದರು.
Advertisement. Scroll to continue reading.
ಇಂದು ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಭಾಗಿಯಾಗಿದ್ದರು. ಈ ವೇಳೆ ವಿಜಯೇಂದ್ರರ ಕಾಲಿಗೆ ಬಿದ್ದ ಪ್ರಭು ಚೌಹಾಣ್, ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಸಾಮಾನ್ಯ ಕಾರ್ಯಕರ್ತನಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಒಳ್ಳೆ ಕಾರ್ಯಕರ್ತನಿಗೆ ಟಿಕೆಟ್ ಕೊಡಿ ನಾವು ಗೆಲ್ಲಿಸುತ್ತೇವೆ. ಇದು ನನ್ನ ಅಭಿಪ್ರಾಯ ಅಲ್ಲ, ಸಮಸ್ತ ಕಾರ್ಯಕರ್ತರ ಅಭಿಪ್ರಾಯ ಎಂದಿದ್ದಾರೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಬೀದರ್ ಸಂಸದರೂ ಆಗಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮರು ಟಿಕೆಟ್ ನೀಡುವುದನ್ನು ವಿರೋಧಿಸುತ್ತಿರುವ ಪಕ್ಷದ ನಾಯಕರೊಂದಿಗೆ ಮುಂಬರುವ ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಇತ್ತೀಚೆಗೆ ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು.
ಸಭೆಯಲ್ಲಿ ಕರಡಿ ಸಂಗಣ್ಣ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮತ್ತೆ ಟಿಕೆಟ್ ನೀಡುವುದನ್ನು ಪಕ್ಷದ ಪದಾಧಿಕಾರಿಗಳು ವಿರೋಧಿಸಿದ್ದರು. ಖೂಬಾ ಸಂಸದರಾಗಿರುವ ಬೀದರ್‌ನಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ವಶವಾಗಿದೆ. ಆದರೆ, ಬಿಜೆಪಿ ಶಾಸಕರು ಖೂಬಾಗೆ ಟಿಕೆಟ್ ನೀಡುವುದನ್ನು ವಿರೋಧಿಸಲಾಗುತ್ತಿದೆ.
ಭಗವಂತ ಖೂಬಾ ಅವರು ಬಿಜೆಪಿ ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ನಮ್ಮ ಭವಿಷ್ಯ ಹಾಳುಮಾಡುವ ಪ್ರಯತ್ನ ನಡೆಸಿದ್ದರು ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಸಭೆಯಲ್ಲಿ ಖೂಬಾ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಾಜಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಶರಣು ಸಲಗರ ಕೂಡ ಬೆಂಬಲವಾಗಿ ಮಾತನಾಡಿ ಖೂಬಾ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದರು.
Advertisement. Scroll to continue reading.
ಇಬ್ಬರೂ ಶಾಸಕರು ಖೂಬಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಖೂಬಾ ಅವರೂ ಧ್ವನಿ ಎತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದ್ದರು. ಖೂಬಾ ಅವರು ಸಭೆಯಿಂದ ಹೊರ ನಡೆಯುವ ವೇಳೆ ಕ್ಷೇತ್ರದ ಮುಂದಿನ ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ತಿಳಿಸುವಂತೆ ಶಾಸಕರನ್ನು ಕೇಳಿದಾಗ ಮತ್ತೆ ಬೀದರ್ ಟಿಕೆಟ್ ಕೊಟ್ಟರೆ ಖೂಬಾ ಪರ ಪ್ರಚಾರ ಮಾಡುವುದಿಲ್ಲ ಎಂದು ಶಾಸಕರು ಹೇಳಿದ್ದರು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದರು.