ಬೆಂಗಳೂರು : ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಭಾರತ್ ಬ್ರ್ಯಾಂಡ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಪ್ರತಿ ಕೆಜಿ ಅಕ್ಕಿಗೆ ಕೇವಲ 29 ರೂ. ಹಾಗೂ ಪ್ರತಿ ಕೆಜಿ ತೊಗರಿ ಬೇಳೆಗೆ 60 ರೂ. ನಿಗದಿ ಮಾಡಲಾಗಿದೆ.
ಈ ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಮ್ಮ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. 29 ರೂಪಾಯಿಗೆ ಕೆ.ಜಿ ಅಕ್ಕಿ, ಗೋದಿ 50ರೂ, ಹೆಸರು ಕಾಳು 90, ತೊಗರಿ ಬೇಳೆ 60 ರೂ ಕೆಜಿಗೆ ಮಾರಾಟ ಮಾಡಲಾಗ್ತಿದೆ. ಭಾರತ್ ಬ್ರಾಂಡ್ ಹೆಸರಲ್ಲಿ ಪ್ರತಿ ಕೆ.ಜಿ ಅಕ್ಕಿ 29ರೂಗೆ ನೀಡಲು ಹಸಿರು ನಿಶಾನೆ ನೀಡಲಾಗಿದೆ. ಇಂತ ಒಳ್ಳೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಹೆಮ್ಮೆ ಇದೆ. NCCF ಅಧಿಕಾರಿ ವರ್ಗಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
Advertisement. Scroll to continue reading.
ದೇಶದ ಇತಿಹಾಸದಲ್ಲಿ, ಬಡವರು ಮತ್ತು ಮಧ್ಯಮ ವರ್ಗಕ್ಕೆ ಯೋಜನೆ ತಲುಪಲಿದೆ. ಚುನಾವಣೆ ಪೂರ್ವದಲ್ಲಿ 10 ಕೆ.ಜಿ ಅಕ್ಕಿ ಉಚಿತ ನೀಡೋದಾಗಿ ಹೇಳಿದ್ದರು. ಆದರೆ, ಕೇಂದ್ರ ಸರ್ಕಾರದ 5 ಕೆ.ಜಿ ಅಕ್ಕಿ ಹೊರತುಪಡಿಸಿ, ರಾಜ್ಯ ಸರ್ಕಾರದಿಂದ ಒಂದು ಕೆ.ಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಪುನಃ ಕೇಂದ್ರ ಸರ್ಕಾರವೇ ಜನರಿಗೆ ಅನುಕೂಲ ಆಗುವಂತೆ ಕಡಿಮೆ ದರದಲ್ಲಿ ಅಕ್ಕಿಯನ್ನು ನೀಡಲು ಮುಂದಾಗಿದೆ. ಪ್ರಸ್ತುತ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ಚಾಲನೆ ಸಿಕ್ಕಿದ್ದು, ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಮಾಜಿ ಸಿಎಂ ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭ ಶಾಸಕ ಎಸ್.ಆರ್.ವಿಶ್ವನಾಥ್, ಎನ್ ಸಿಸಿಎಫ್ ಜಿಎಂ ಜಾನ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.
Advertisement. Scroll to continue reading.