ಉಡುಪಿ : ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ್ದ ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಶನಿವಾರ ರಜಾದಿನವಾದ ಕಾರಣ ನ್ಯಾಯಾಧೀಶರ ವಸತಿ ಕಚೇರಿಯಲ್ಲಿ ಸಲ್ಲಿಕೆ ಮಾಡಲಾಯಿತು. ಚಾರ್ಜ್‌ಶೀಟ್ ಅನ್ನು ಅಂತಿಮ ಪರಿಶೀಲನೆಗೊಳಪಡಿಸಿ ಫೆ.15ಕ್ಕೆ ಅಂತಿಮಗೊಳಿಸಿ ಆರೋಪಿ ಪರ ವಕೀಲರಿಗೆ ನೀಡಲಾಗುತ್ತದೆ. ಬಳಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ.ಪ್ರಕರಣದ ಬಗ್ಗೆ ತನಿಖೆ ನಡೆಸಲಾಗಿದ್ದು, ಎಲ್ಲ ಸಾಕ್ಷ್ಯಗಳು ಹಾಗೂ ಎಫ್ಎಸ್‌ಎಲ್ ವರದಿಗಳು ಬಂದಿವೆ.
ಈ ಎಲ್ಲ ಮಾಹಿತಿಗಳನ್ನು ಕ್ರೋಢೀಕರಿಸಿ ವಿಶೇಷ ಸರಕಾರಿ ಅಭಿಯೋಜಕರ ಸಲಹೆ ಪಡೆದು ತನಿಖಾಧಿಕಾರಿ ಮಂಜುನಾಥ್ ಗೌಡ ಅವರು ಶನಿವಾರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಆದಷ್ಟು ಬೇಗ ಆರಂಭಿಸುವಂತೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ವಿಚಾರಣೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ.ತಿಳಿಸಿದ್ದಾರೆ.
Advertisement. Scroll to continue reading.
ಸುಮಾರು 244 ಸಾಕ್ಷಿಗಳ ಸಹಿತ 2,202 ಪುಟಗಳು ಹಾಗೂ 15 ಸಂಪುಟಗಳು ದೋಷಾರೋಪಣ ಪಟ್ಟಿಯಲ್ಲಿದೆ.
ನ.12, 2023 ರಂದು ನೇಜಾರಿನ ತೃಪ್ತಿ ನಗರದ ಮನೆಯೊಂದರಲ್ಲಿ ನಾಲ್ವರ ಕೊಲೆ ನಡೆದಿತ್ತು. ಈ ಘಟನೆ ಉಡುಪಿ ಜಿಲ್ಲೆಯಲ್ಲಿ ತಲ್ಲಣ ಸೃಷ್ಠಿಸಿತ್ತು. ನ.15 ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
Advertisement. Scroll to continue reading.