ಚಂಡೀಗಢ: ರೈಲಿನಿಂದ ಇಳಿಯುವ ಮುನ್ನ ಲೋಕೋಪೈಲೆಟ್ ಹ್ಯಾಂಡ್ ಬ್ರೇಕ್ ಹಾಕಲು ಮರೆತ ಪರಿಣಾಮ ಗೂಡ್ಸ್ ರೈಲೊಂದು ಸುಮಾರು 70 ಕಿಲೋಮೀಟರ್ಗಳವರೆಗೂ ವೇಗವಾಗಿ ಚಲಿಸಿದ ಘಟನೆ ಪಂಜಾಬ್ನಲ್ಲಿ ನಡೆದಿದೆ. ಅದೃಷ್ಟವಶಾತ್, ಸಂಭವಿಸಬಹುದಾಗಿದ್ದ ಭಯಾನಕ ಅವಘಡ ತಪ್ಪಿದೆ
ಕಲ್ಲುಗಳನ್ನು ತುಂಬಿದ್ದ ಗೂಡ್ಸ್ ರೈಲನ್ನು ಪಠಾಣ್ಕೋಟ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಚಾಲಕ ರೈಲಿನಿಂದ ಇಳಿದಿದ್ದರು. ಈ ವೇಳೆ ರೈಲು ಇದ್ದಕ್ಕಿದ್ದಂತೆ ಚಲಿಸಲು ಆರಂಭಿಸಿದೆ. ಸ್ವಲ್ಪ ಸಮಯದ ಬಳಿಕ ರೈಲು ಸುಮಾರು 100 ಕಿ.ಮೀ ವೇಗವನ್ನು ಪಡೆದುಕೊಂಡು, ಐದು ರೈಲ್ವೇ ನಿಲ್ದಾಣಗಳನ್ನು ದಾಟಿ 70 ಕಿಲೋಮೀಟರ್ ವರೆಗೂ ಸಂಚರಿಸಿದೆ. ರೈಲ್ವೆ ಅಧಿಕಾರಿಗಳು ಹಳಿಗಳ ಮೇಲೆ ಮರದ ತುಂಡುಗಳನ್ನು ಇರಿಸುವ ಮೂಲಕ ಉಚಿ ಬಸ್ಸಿಯಲ್ಲಿ ಕೊನೆಗೂ ಅದನ್ನು ತಡೆಯುವಲ್ಲಿ ಸಫಲರಾಗಿದ್ದಾರೆ
ಘಟನೆಯಲ್ಲಿ ಯಾವುದೇ ಸಾವು- ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 53 ವ್ಯಾಗನ್ಗಳಿರುವ ಡೀಸೆಲ್ ಲೋಕೋ ಮೋಟಿವ್ ರೈಲು ಜಮ್ಮು ಮತ್ತು ಕಾಶ್ಮೀರದ ಕತುವಾದಿಂದ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಹಳ್ಳಿಯೊಂದಕ್ಕೆ ತೆರಳುತ್ತಿತ್ತು. ಬೆಳಿಗ್ಗೆ 7.25 ರಿಂದ 9 ಗಂಟೆ ನಡುವೆ ಈ ಘಟನೆ ಸಂಭವಿಸಿದೆ. ಈ ರೈಲಿನ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಇಬ್ಬರೂ ಅದರಲ್ಲಿ ಇರಲಿಲ್ಲ. ಮುಂದೆ ಹೋದಂತೆ ರೈಲು ಕ್ರಮೇಣವಾಗಿ ವೇಗ ಪಡೆದುಕೊಂಡಿತ್ತು.
Advertisement. Scroll to continue reading.
ರೈಲು ನಿಲ್ದಾಣವೊಂದನ್ನು ಈ ಸರಕು ಸಾಗಣೆ ರೈಲು ಅತಿ ವೇಗವಾಗಿ ಹಾದು ಹೋಗುವ ವಿಡಿಯೋವೊಂದನ್ನು ಯಾರೋ ಚಿತ್ರೀಕರಿಸಿದ್ದಾರೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.