ರಾಷ್ಟ್ರೀಯ

ರಾಜ್ಯಸಭೆ ಚುನಾವಣೆ: ಸಂಖ್ಯಾಬಲ ಇಲ್ಲದಿದ್ದರೂ ಹಿಮಾಚಲ ಗೆದ್ದ ಬಿಜೆಪಿ

0

ಹೊಸದಿಲ್ಲಿ: ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದ 10, ಹಿಮಾಚಲ ಪ್ರದೇಶದ 1 ರಾಜ್ಯಸಭೆ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡ್ಡ ಮತದಾನ ನಡೆದಿದ್ದು, 11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನ ಪಡೆಯುವಲ್ಲಿ ಸಫಲವಾಗಿದೆ.

ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭೆಯ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮುಖಭಂಗ ಅನುಭವಿಸಿದೆ. 40 ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರ ಬೆಂಬಲವಿದ್ದರೂ, ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ.

ವಿಧಾನಸಭೆಯಲ್ಲಿ 25 ಶಾಸಕರ ಬಲ ಹೊಂದಿದ್ದ ಬಿಜೆಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕುತೂಹಲ ಮೂಡಿಸಿತ್ತು. ಮಂಗಳವಾರ ನಡೆದ ಮತದಾನದಲ್ಲಿ ಕಾಂಗ್ರೆಸ್‌ ಪಕ್ಷದ 6 ಹಾಗೂ ಮೂವರು ಪಕ್ಷೇತರ ಶಾಸಕರು ಬಿಜೆಪಿ ಪರ ಮತ ಚಲಾಯಿಸಿದರು.

Advertisement. Scroll to continue reading.

ಅಂತಿಮವಾಗಿ ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ ಹಾಗೂ ಬಿಜೆಪಿಯ ಹರ್ಷ ಮಹಾಜನ್‌ ಅವರು ತಲಾ 34 ಮತಗಳನ್ನು ಪಡೆದುಕೊಂಡು ಸಮಬಲ ಸಾಧಿಸಿದರು. ಅಭ್ಯರ್ಥಿ ಗೆಲುವಿನ ತೀರ್ಮಾನಕ್ಕೆ ಟಾಸ್‌ ಹಾಕಲಾಯಿತು. ಟ್ರೈ ಬ್ರೇಕರ್‌ನಲ್ಲಿ ಸಿಂಘ್ವಿ ಸೋಲು ಅನುಭವಿಸಿದರು.

ಫಲಿತಾಂಶ ಪ್ರಕಟಕ್ಕೂ ಮುನ್ನವೇ ನಮ್ಮ ಅಭ್ಯರ್ಥಿ ಜಯಗಳಿಸಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತು. ”ಆತ್ಮಸಾಕ್ಷಿ ಮತಗಳ ಬಲದಿಂದ ಹರ್ಷ ಮಹಾಜನ್‌ ಗೆಲುವು ಸಾಧಿಸಿದ್ದಾರೆ,” ಎಂದು ಮಾಜಿ ಸಿಎಂ ಜೈರಾಂ ಠಾಕೂರ್‌ ಘೋಷಣೆ ಮಾಡಿದ್ದರು

ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ಎಸ್‌ಪಿ ಶಾಸಕರು

ರಾಜ್ಯಸಭೆಯ 10 ಸ್ಥಾನಗಳಿಗೆ ಚುನಾವಣೆ ನಡೆದ ಉತ್ತರ ಪ್ರದೇಶದಲ್ಲೂಅಡ್ಡ ಮತದಾನವಾಗಿದೆ. ಸಮಾಜವಾದಿ ಪಕ್ಷದ 7 ಶಾಸಕರು ಆಡಳಿತಾರೂಢ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರೆ, ಇಬ್ಬರು ಶಾಸಕರು ವ್ಹಿಪ್‌ ಉಲ್ಲಂಘಿಸಿ ಮತದಾನದಿಂದಲೇ ದೂರ ಉಳಿದಿದ್ದಾರೆ. ಎನ್‌ಡಿಎ ಮಿತ್ರ ಪಕ್ಷ ಸುಹೇಲ್‌ದೇವ್‌ ಭಾರತೀಯ ಸಮಾಜದ ಒಬ್ಬ ಶಾಸಕರು ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 252, ಮಿತ್ರ ಪಕ್ಷಗಳ 18 ಶಾಸಕರ ಬಲ ಹೊಂದಿದೆ. ಏಳು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಂಡು, ಉಳಿದ ಮತಗಳು ಹಾಗೂ ಇತರೆ ಪಕ್ಷದ ಶಾಸಕರ ಬೆಂಬಲ ಪಡೆದು ಎಂಟನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ. 108 ಸದಸ್ಯ ಬಲ ಹೊಂದಿದ್ದ ಸಮಾಜವಾದಿ ಪಕ್ಷ ಮೂರು ಸ್ಥಾನ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ, ಏಳು ಶಾಸಕರ ಅಡ್ಡ ಮತದಾನದ ಪರಿಣಾಮ ಪಕ್ಷದ ಮೂರನೇ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com