ಮುಂಬೈ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈಗ ಮತ್ತೆ ಇವಿಎಂ ಮೇಲೆ ಆರೋಪಗಳು ಕೂಡ ಆರಂಭವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇವಿಎಂಗಳ ಬಗ್ಗೆ ಹೊಸ ವ್ಯಾಖ್ಯಾನ ಮಾಡಿದ್ದು, ‘ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರಲು ಒಬ್ಬ ವ್ಯಕ್ತಿ ಸಜ್ಜಾಗಿದ್ದಾರೆ. ‘ಇವಿಎಂ’ನಲ್ಲೇ ಅವರ ಆತ್ಮ ಅಡಗಿದೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.
ಮುಂಬೈನಲ್ಲಿ ಭಾನುವಾರ ನಡೆದ ಭಾರತ ಜೋಡೊ ಐಕ್ಯತಾ ನ್ಯಾಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮತ ಯಂತ್ರಗಳಿಲ್ಲದೇ ಮೋದಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಯಾವ ಚುನಾವಣೆಯನ್ನೂ ಗೆಲ್ಲುವುದಿಲ್ಲ. ಇವಿಎಂಗಳೇ ಮೋದಿ ಗೆಲುವಿನ ಗುಟ್ಟು ಎಂದು ವಾಗ್ದಾಳಿ ನಡೆಸಿದರು.
ಮತ ಯಂತ್ರಗಳ ಬಗ್ಗೆ ಪ್ರತಿಪಕ್ಷಗಳು ಹಾಗೂ ದೇಶದ ಜನರಲ್ಲಿ ಮೂಡಿರುವ ಸಂಶಯಗಳ ಬಗ್ಗೆ ಆಯೋಗದ ಬಳಿ ಉತ್ತರವೇ ಇಲ್ಲ. ನಮ್ಮ ಪರಿಣತರ ಮುಂದೆ ಇವಿಎಂಗಳ ನೈಜತೆ ಪರೀಕ್ಷಿಸಲು ಆಯೋಗ ಸಿದ್ಧವಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು.
Advertisement. Scroll to continue reading.
ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರತಿಪಕ್ಷಗಳ ನಾಯಕರನ್ನು ಹೆದರಿಸಿ, ಬೆದರಿಸಿ ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ ಎಂದು ದೂರಿದರು.
ಇತ್ತೀಚಿಗೆ ಕಾಂಗ್ರೆಸ್ ತೊರೆದ ಮಹಾರಾಷ್ಟ್ರದ ನಾಯಕರೊಬ್ಬರು ನನ್ನ ಅಮ್ಮನಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದರು. ನನಗೆ ಜೈಲಿಗೆ ಹೋಗಲು ಇಷ್ಟವಿಲ್ಲ. ಕಾಂಗ್ರೆಸ್‌ನಲ್ಲೇ ಇದ್ದರೆ ಜೈಲು ಸೇರುವುದು ಖಚಿತ. ಇ.ಡಿ, ಸಿಬಿಐ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿರುವ ಶಕ್ತಿಯ ವಿರುದ್ಧ ಹೋರಾಡುವ ಸಾಮರ್ಥ್ಯ ನನಗಿಲ್ಲ. ಹೀಗಾಗಿ ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಬಗ್ಗೆಯೇ ನನಗೆ ಅಸಹ್ಯವಾಗುತ್ತಿದೆ ಎಂದು ಹೇಳಿದ್ದರು ಎಂದು ರಾಹುಲ್ ಗಾಂಧಿ ತನಿಖಾ ಸಂಸ್ಥೆಗಳ ವಿರುದ್ಧ ಕಿಡಿಕಾರಿದರು.
Advertisement. Scroll to continue reading.