ಚೆನ್ನೈ: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಉದ್ಘಾಟನಾ ಸಮಾರಂಭ ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 22 ರಂದು ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಟೂರ್ನಿಯ ಆರಂಭಿಕ ಪಂದ್ಯಕ್ಕೂ ಮುನ್ನ ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸಂಗೀತ ದಿಗ್ಗಜ ಎಆರ್ ರೆಹಮಾನ್ ಹಾಗೂ ಸೋನು ನಿಗಮ್ ಅವರು ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿದೆ. “2024ರ ಟಾಟಾ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭದ ನಿಮಿತ್ತ ವೇದಿಕೆ ಸಿದ್ದವಾಗಿದೆ, ದೀಪಗಳು ಅಂಟಿವೆ, ಸ್ಟಾರ್‌ಗಳ ಮಿಂಚಲು ಸಜ್ಜಾಗಿದ್ದಾರೆ. ಕ್ರಿಕೆಟ್ ಮತ್ತು ಮನರಂಜನೆಯ ಮರೆಯಲಾಗದ ಸಮ್ಮಿಲನಕ್ಕೆ ಸಿದ್ಧರಾಗಿ. ಮಾರ್ಚ್ 22, 06: 30ಕ್ಕೆ,” ಎಂದು ಐಪಿಎಲ್ ಟ್ವೀಟ್ ಮಾಡಿದೆ.
2023ರ ಐಪಿಎಲ್ ಟೂರ್ನಿಯ ಉದ್ಘಟನಾ ಪಂದ್ಯಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಹಾಗೂ ತಮನ್ನಾ ಭಾಟಿಯಾ ಅವರು ತಮ್ಮ ನೃತ್ಯದ ಮೂಲಕ ಅಭಿಮಾನಿಗಳ ಗಮನವನ್ನು ಸೆಳೆದಿದ್ದರು. ಇವರ ಜೊತೆಗೆ ಅರಿಜಿತ್ ಸಿಂಗ್ ಅವರ ತಮ್ಮ ಕಂಠದ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ರಂಗೇರಿಸಿದ್ದರು.
Advertisement. Scroll to continue reading.
ಎಆರ್ ರೆಹಮಾನ್ ಹಾಗೂ ಸೋನು ನಿಗಮ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಡುಗಳ ಜೊತೆಗೆ ದೇಶಭಕ್ತಿ ಗೀತೆಗಳನ್ನು ಕೂಡ ಹಾಡಲಿದ್ದಾರೆ. ಒಬ್ಬೊಬ್ಬ ಕಲಾವಿದರಿಗೆ ನಿಗದಿತ ಸಮಯವನ್ನು ನೀಡಲಾಗಿದೆ.
“ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಅವರ ನೃತ್ಯ ಸೇರಿದಂತೆ ಇಡೀ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಧ ಗಂಟೆ ಸಮಯವನ್ನು ನೀಡಲಾಗಿದೆ. ಸೋನು ನಿಗಮ್ ಹಾಗೂ ಎಆರ್ ರೆಹಮಾನ್ ಅವರು ಬಾಲಿವುಡ್‌ನ ಕೆಲ ಹಿಟ್ ಹಾಡುಗಳನ್ನು ಹಾಡಲಿದ್ದಾರೆ,” ಎಂದು ಮೂಲಗಳು ತಿಳಿಸಿರುವುದನ್ನು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
Advertisement. Scroll to continue reading.