ಮಂಗಳೂರು : ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ
Published
1
ಮಂಗಳೂರು : ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆಯಾದ ಘಟನೆ ಮಂಗಳೂರು ಸಮುದ್ರ ತೀರದಿಂದ 60 ನಾಟಿಕಲ್ ಮೈಲ್ ದೂರದಲ್ಲಿ ನಡೆದಿದೆ. ಎಂಎಸ್ವಿ ಸಲಾಮತ್ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು ಮುಳುಗಡೆಯಾಗಿದೆ.
ಈ ಹಡಗು 2025ರ ಮೇ 12ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು. ಮೇ.18ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು. ಹಡಗಿನಲ್ಲಿ 6 ಭಾರತೀಯ ಸಿಬ್ಬಂದಿ ಇದ್ದರು ಎನ್ನಲಾಗಿದೆ. ಸಿಮೆಂಟ್ ಹಾಗೂ ನಿರ್ಮಾಣ ಸಾಮಗ್ರಿ ಹಡಗಿನಲ್ಲಿತ್ತು ಎಂದು ತಿಳಿದುಬಂದಿದೆ.
ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ನೀರು ನುಗ್ಗಿದ್ದು, ಹಡಗು ಮುಳುಗಿದೆ ಎಂದು ಹೇಳಲಾಗಿದೆ. ಈ ವೇಳೆ ಎಲ್ಲಾ 6 ಸಿಬ್ಬಂದಿ ಹಡಗಿನಿಂದ ಹಾರಿ ಸಣ್ಣ ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ರಕ್ಷಿಸಲ್ಪಟ್ಟವರು. ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ನ ‘ವಿಕ್ರಂ’ ಶಿಪ್ ನ ಮೂಲಕ ರಕ್ಷಣಾ ಕಾರ್ಯ ನಡೆಸಲಾಯಿತು.