ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜು : ವಿದ್ಯಾರ್ಥಿ ಸಂಘ ಉದ್ಘಾಟನೆ, ಪ್ರೆಶರ್ಸ್ ಡೇ
Published
4
ಶಿರ್ವ : ಇಂದಿನ ಮಕ್ಕಳು ತಮ್ಮ ಆದರ್ಶ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಎಡವುತ್ತಿದ್ದಾರೆ. ತುಳಸಿ ಗೌಡ, ಸಾಲು ಮರದ ತಿಮ್ಮಕ್ಕ, ಹರೇಕಳ ಹಾಜಬ್ಬನಂತಹ ವ್ಯಕ್ತಿಗಳನ್ನು ಯಾಕೆ ಆದರ್ಶ ವ್ಯಕ್ತಿಗಳನ್ನಾಗಿ ತಗೋಬಾರದು? ಅವರೆಲ್ಲ ಪ್ರಚಾರದ ಆಸೆ ಪಡಲಿಲ್ಲ, ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ, ಟಿವಿ, ಸಂದರ್ಶನ ಕೊಡಲಿಲ್ಲ, ಜಾಹೀರಾತುಗಳಿಗೆ ರಾಯಭಾರಿಗಳಾಗಿಲ್ಲ. ಆದರೂ ಇವರುಗಳು ಆದರ್ಶ ವ್ಯಕ್ತಿಗಳಾಗಬೇಕಾಗಿದೆ ಎಂದು ಇನ್ನಾ ಎಂ.ವಿ ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಭಟ್ ಕೆ ಹೇಳಿದರು.
ಅವರು ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಗುರು ವೆರಿ ರೆವೆರೆಂಡ್ ಫಾದರ್ ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ನಾವು ಮಾನವರಾಗಬೇಕೆ ಹೊರತು ದಾನವರಲ್ಲ. ಮನುಷ್ಯನಲ್ಲಿ ವಿದ್ಯೆ, ಸಂಪತ್ತು ಎಷ್ಟಿದ್ದರೂ, ಮನುಷ್ಯತ್ವ ಇಲ್ಲದಿದ್ದರೆ ಉಪಯೋಗವಿಲ್ಲ ಎಂದರು. ವೇದಿಕೆಯಲ್ಲಿ ಸ್ಥಳೀಯ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ Ln. ಮೇಲ್ವಿನ್ ಅರಾನ್ಹ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ Ln. ನೊರ್ಬರ್ಟ್ ಮಚಾಡೊ, ಸಂಸ್ಥೆಯ ಪ್ರಾಂಶುಪಾಲ ಜಯಶಂಕರ್ ಕೆ, ವಿದ್ಯಾರ್ಥಿ ನಾಯಕಿ ಜೆನಿಶಿಯ ಕಾಸ್ಟಲಿನೋ, ಉಪನಾಯಕ ಆಸ್ಟಿನ್ ಮಚಾಡೊ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಉಪನ್ಯಾಸಕಿ ಪ್ರಭಾ ಶೆಣೈ ಅತಿಥಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲ ಜಯಶಂಕರ್ ಕೆ. ಸ್ವಾಗತಿಸಿ, ಉಪನ್ಯಾಸಕಿ ಮರಿಯಾ ಜೆಸಿಂತಾ ಫುರ್ಟಾಡೋ ವಂದಿಸಿದರು. ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.