ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಮರವಂತೆ ಯಲ್ಲಿ ಕಡಲ್ಕೊರೆತ ಭೀತಿ ತೀವ್ರಗೊಳ್ಳುತ್ತಿದೆ. ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರ ದಿಕ್ಕಿನ 500 ಮೀಟರ್ ಉದ್ದದ ತೀರಕ್ಕೆ ಅಪ್ಪಳಿಸುತ್ತಿದೆ. ಈಗಾಗಲೇ ಎರಡು ಮೀಟರ್ ಅಗಲದ ಭೂಪ್ರದೇಶದ ವರೆಗೆ ಭೂಕೊರೆತವಾಗಿದೆ.
ಅಪಾಯದ ಅಂಚಲ್ಲಿ ಮೀನುಗಾರರ ಮನೆಗಳು
ಪಕ್ಕು ಮನೆ ದಿನಕರ ಖಾರ್ವಿಯವರಿಗೆ ಸೇರಿದ ಮೀನುಗಾರಿಕಾ ಶೆಡ್ ಉರುಳಿದೆ. ಪಕ್ಕು ಮನೆ ಚಂದ್ರ ಖಾರ್ವಿ ಎಂಬವರು ತಮ್ಮ ಶೆಡ್ ಉಳಿಸಿಕೊಳ್ಳುವ ಸಲುವಾಗಿ ಮರಳಿನ ಚೀಲಗಳನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ. 50 ಲಕ್ಷ ರೂ.ವೆಚ್ಚದಲ್ಲಿ ಕೊರತೆ ನಡೆದಿರುವ ಸ್ಥಳದಿಂದ, 10 ರಿಂದ 15 ಮೀಟರ್ ಅಂತರದಲ್ಲಿ ಮೂರು ತಿಂಗಳ ಹಿಂದೆಯಷ್ಟೇ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಅದರಾಚೆಗೆ 25 ಮೀನುಗಾರರ ಮನೆಗಳಿವೆ. ಕೊರೆತ ಉಲ್ಬಣಿದರೆ ಅಪಾಯವಿದೆ ಎಂದು ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ ಹೇಳಿದ್ದಾರೆ.
Advertisement. Scroll to continue reading.
ಮತ್ತೆ ಮತ್ತೆ ಮರುಕಳಿಸುತ್ತಿದೆ ಕಡಲ್ಕೊರೆತ
ಹೊರಬಂದರು ಕಾಮಗಾರಿಯ ಬಳಿಕವೂ ಹುಣ್ಣಿಮೆ, ಅಮಾವಾಸ್ಯೆಯ ವೇಳೆ ಇಲ್ಲಿ ಬೇಸಿಗೆಯಲ್ಲೂ ಕೊರೆತ ಸಂಭವಿಸುತ್ತಿರುತ್ತದೆ. ಹತ್ತಾರು ಮೀಟರ್ ಅಗಲದ ಪ್ರದೇಶ ಕಡಲ ಸೇರುತ್ತಿದೆ. ಹೆದ್ದಾರಿ ರಕ್ಷಣೆಗೆ ಮಾರಸ್ವಾಮಿಯಲ್ಲಿ ನಿರ್ಮಿಸಿರುವ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಮಾದರಿಯ ಅಲೆತಡೆಗಳನ್ನು ನಿರ್ಮಿಸಬೇಕೆಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೆ.ಎಂ.ಸುದರ್ಶನ ಖಾರ್ವಿ ಹೇಳಿದ್ದಾರೆ.
ದಾಸಿ ಲಕ್ಷ್ಮಣ, ಬೇಡು ಶೀನ ಖಾರ್ವಿ, ಎಂ.ಎಸ್.ಕೆ.ಮರ್ಲ ಖಾರ್ವಿ, ಬೀದಿ ಮಂಜ ಖಾರ್ವಿ, ಕೆ.ಎಂ.ರಾಜು ಖಾರ್ವಿ, ಗೋವೆಕನ್ನಮನೆ ಶಂಕರ ಖಾರ್ವಿ, ಕೆ.ಎಂ.ಶ್ರೀನಿವಾಸ ಖಾರ್ವಿ, ಕೆ.ಎಂ. ಸುದರ್ಶನ ಖಾರ್ವಿ, ಬಡ್ಕನ ನಾರಾಯಣ ಖಾರ್ವಿ, ಬಡ್ಕನ ಅಶೋಕ ಖಾರ್ವಿ ಅವರಿಗೆ ಸೇರಿದ್ದ 33 ತೆಂಗಿನ ಮರಗಳು ಉರುಳಿವೆ.