Uncategorized

ಕೋವಿಡ್ ಮುಕ್ತವಾಗುವ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

0


ಉಡುಪಿ : ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ಕೋವಿಡ್ ನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದಲ್ಲಿ, ಅಂತಹ ಗ್ರಾಮ ಪಂಚಾಯತ್ ಗಳಲ್ಲಿ, ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು, ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸಲಾಗುವುದು ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ , ಕೋವಿಡ್ ನಿಯಂತ್ರಣ ಕುರಿತು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಗ್ರಾಮ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸದಸ್ಯರುಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.


ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಎಲ್ಲಾ 36 ಗ್ರಾ.ಪಂ. ಗಳ ಕಾರ್ಯಪಡೆಯ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರೊಂದಿಗೆ ಕರೋನಾ ನಿಯಂತ್ರಣಕ್ಕೆ ತರಲು ಮುಂದಾಗಬೇಕು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನ ಸೋಂಕಿತರ ಮನೆಗಳಿಗೆ ಭೇಟಿ ನೀಡಿ, ಪಲ್ಸ್ ಆಕ್ಸಿಮೀಟರ್ ಮೂಲಕ ಅಕ್ಸಿಜಿನ್ ಪ್ರಮಾಣವನ್ನು ಪತ್ತೆ ಮಾಡುವುದರ ಜೊತೆಗೆ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಬೇಕು ಎಂದರು. ತೀವ್ರ ತರದ ರೋಗ ಲಕ್ಷಣಗಳು ಕಂಡುಬಂದ ಕರೋನಾ ಪೀಡಿತರನ್ನು ತುರ್ತಾಗಿ ಆಸ್ಪತ್ರೆಗಳಿಗೆ ದಾಖಲಿಸುವ ಕಾರ್ಯವನ್ನು ಗ್ರಾಮೀಣ ಟಾಸ್ಕ್‍ಫೋರ್ಸ್ ಸದಸ್ಯರು ಮಾಡಬೇಕೆಂದು ಸೂಚನೆ ನೀಡಿದರು.


ಸೋಂಕಿತರ ಮನೆ ಸೀಲ್ ಡೌನ್, ಕೈಗೆ ಸೀಲ್
ಮಾನ್ಯ ಪ್ರಧಾನಮಂತ್ರಿಗಳ ಆಶಯದಂತೆ ಹಾಗೂ ಮುಖ್ಯಮಂತ್ರಿಗಳ ಅಭಿಲಾಷೆಯಂತೆ, ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ನಿಯಂತ್ರಿಸಲು ಗ್ರಾ.ಪಂ. ಟಾಸ್ಕ್ ಫೋರ್ಸ್ ಗಳಿಂದ ಸಾಧ್ಯ. ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡು, ಸೋಂಕು ನಿಯಂತ್ರಿಸುವ ಗೌರವಕ್ಕೆ ಪಾತ್ರವಾಗುವ ಪಂಚಾಯತ್ ಗಳಿಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಕಂಡುಬರುವ ಮನೆಗಳನ್ನು ಸೀಲ್‍ಡೌನ್ ಮಾಡಬೇಕು ಎಂದ ಅವರು, ಸೋಂಕಿತರು ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿ ಸುತ್ತಾಡುವುದನ್ನು ನಿಯಂತ್ರಿಸಲು , ವ್ಯಕ್ತಿಯ ಗುರುತಿಗೆ ಕೈ ಗೆ ಸೀಲ್ ಹಾಕುವಂತೆ ಸೂಚನೆ ನೀಡಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೆಂಗಳೂರಿನ ತಮ್ಮ ಕಚೇರಿಯಿಂದ ವೀಡಿಯೋ ಸಂವಾದದಲ್ಲಿ ಭಾಗವಹಿಸಿ, ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ತಮ್ಮ ಶಾಸಕರ ಅನುದಾನದಿಂದ , ಕಿಟ್ ಗಳು ಹಾಗೂ ಪಲ್ಸ್ ಆಕ್ಸಿಮೀಟರ್‍ಗಳನ್ನು ನೀಡಲಾಗುತ್ತಿದ್ದು ಇದರ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು. ಗ್ರಾ.ಪಂ. ಮಟ್ಟದ ಕಾರ್ಯಪಡೆಯ ಎಲ್ಲಾ ಸದಸ್ಯರು ಒಂದು ತಂಡವಾಗಿ ಕೆಲಸ ಮಾಡಿದಲ್ಲಿ ಕೊರೋನಾ ನಿಯಂತ್ರಣ ಸಾಧ್ಯ ಎಂದರು.

Advertisement. Scroll to continue reading.

ಮಿಯಾರು ಗ್ರಾ.ಪಂ. ಶ್ಲಾಘಿಸಿದ ಡಿಸಿ ಜಗದೀಶ್


ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಅನೇಕ ಮಾಹಿತಿಯನ್ನು ಒದಗಿಸುವುದರ ಜೊತೆಗೆ, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಿಯಾರು ಗ್ರಾಮ ಪಂಚಾಯತ್ ನಲ್ಲಿ ಕೈಗೊಂಡಿರುವ ಕ್ರಮಗಳು ಅತ್ಯುತ್ತಮವಾಗಿದ್ದು, ಇದು ಎಲ್ಲಾ ಪಂಚಾಯತ್ ಗಳಿಗೆ ಮಾದರಿಯಾಗಿದೆ. ಇದನ್ನು ಎಲ್ಲಾ ಗ್ರಾ.ಪಂ. ಗಳು ಪಾಲಿಸಬೇಕು ಎಂದ ಅವರು, ಪಂ.ರಾಜ್ ಪ್ರತಿನಿಧಿಗಳು ಸಹಕಾರ ನೀಡಿ, ಎಲ್ಲರೂ ಕಟಿಬದ್ದವಾಗಿ ಕಾರ್ಯ ಮಾಡುವುದರ ಮೂಲಕ ಕೊರೋನ ನಿಯಂತ್ರಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಕರೋನ ಚುಚ್ಚುಮದ್ದು ನೀಡುವ ಕೇಂದ್ರಗಳಲ್ಲಿ ಜಾಗೃತಿ ವಹಿಸಿ, ಜನಜಂಗುಳಿ ಆಗದಂತೆ ನೋಡಿಕೊಳ್ಳಬೇಕು , ಪ್ರತಿದಿನ ಕೊರೀನಾ ನಿಯಂತ್ರಣಕ್ಕೆ ಯಾವುದೇ ಸಮಸ್ಯೆ ಉಂಟಾದಲ್ಲಿ ತಮ್ಮ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಕಾರ್ಕಳ ಮತ್ತು ಹೆಬ್ರಿ ಗ್ರಾಮ ಪಂಚಾಯತ್‍ನ ಅಧ್ಯಕ್ಷರು, ಉಪಾಧ್ಯಕ್ಷರು, ಪಿ.ಡಿ.ಓಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com